ಲೇಖನ : ಕರಾಳ ಸಮಾಜದಲ್ಲಿ ಹೆಣ್ಣು : ನಿಕ್ಷಿತಾ ಮರಿಕೆ
ಲೇಖನ : ಕೆಲವು ದಿನಗಳ ಹಿಂದೆ ರಕ್ಷಾಬಂಧನ ಬಂತು,ತನ್ನ ಅಣ್ಣನಿಗೆ ಕೈ ನೀಡಿ ರಾಕಿ ಕಟ್ಟಿಸುವ ಅನ್ನುವಷ್ಟರ ಹೊತ್ತಿಗೆ ಆಕೆಯ ಕೈಯನ್ನೇ ಕತ್ತರಿಸಿದರಲ್ಲ.ಆತ ಯಾರಲ್ಲಿ ನ್ಯಾಯ ಕೇಳಬೇಕು? ಮಗಳು ಮನೆಗೆ ತಡವಾಗಿ ಬಂದರೆ ಸಾಕು ಕಳವಳಗೊಳ್ಳುವಂತಹ ತಾಯಿಗೆ, ತನ್ನ ಮಗಳು ವ್ಯಾಘ್ರ ರ ಕೈವಶಕ್ಕೆ ಬಲಿಯಾದಳು ಎಂದರೆ ಆಕೆ ಹೇಗೆ ಕರಗಿಸಿಕೊಳ್ಳುವಳು? ತನ್ನ ಮಗಳಿಗಾಗಿ ವರ್ಷ ಪೂರ್ತಿ ಜೀವ ತೆತ್ತ ತಂದೆಯ ಗತಿಯಾದರು ಏನು?
ಹೌದು. ಇದು ಅವೆಷ್ಟು ಕುಟುಂಬಗಳ ಕಣ್ಣೀರು.
ಮನದಲ್ಲಿ ಸಾವಿರ ಚಿಂತೆ ಹೊತ್ತು, ಮನೆಯಲ್ಲಿ ಅವೆಷ್ಟು ಕಷ್ಟವಿದ್ದರೂ,ಹೃದಯದಲ್ಲಿ ಹೇಳಲಾಗದ ನೋವಿದ್ದರೂ, ಅದರಲ್ಲಿ ಪ್ರೀತಿ ತುಂಬಿ ಜೀವನದಲ್ಲಿ ಒಂದು ಗುರಿಯನಿಟ್ಟು, ನಗುಮುಖದಿಂದಲೇ ಆ ಗುರಿಯತ್ತ ಹೆಜ್ಜೆ ಇಡುವುದು ಒಂದು ಹೆಣ್ಣಿನ ಸಾಮಾನ್ಯ ಸ್ವಭಾವ.ಇಂತಹ ಹೆಣ್ಣು ಪ್ರಾರಂಭದಿಂದಲೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರತಿನಿತ್ಯ ಹೋರಾಟ ಮಾಡುತ್ತಲೇ ಬಂದಿದ್ದಾಳೆ. ಅಭಿವೃದ್ಧಿಶೀಲ ದೇಶದಲ್ಲಿ ಏಕೆ? ಈ ರೀತಿ ಹೆಣ್ಣಿನ ಮೇಲೆ ದೌರ್ಜನ್ಯ., ಹೆಣ್ಣನ್ನು ಪೂಜನೀಯಭಾವದಿಂದ ನೋಡಬೇಕೆನ್ನುವ ದೇಶದಲ್ಲಿ ಹೀಗೇಕೆ ಸರಣಿ ಅತ್ಯಾಚಾರಗಳು? ಭಾರತ,ಕರ್ನಾಟಕದಲ್ಲಿ ಈ ರೀತಿ ಒಂದೇ ವಾರದಲ್ಲಿ ಸರಣಿ ಅತ್ಯಾಚಾರಗಳು ನಡೆಯುತ್ತಿದೆ ಎಂದರೆ ಈ ಸಮಾಜದಲ್ಲಿ ಹೆಣ್ಣಿಗೆ ಎಲ್ಲಿದೆ ಸುರಕ್ಷೆ. ಈಗ ಎಲ್ಲಿದೆ ಬೀಗುವ ಪ್ರಭುತ್ವಗಳು.
ಸ್ವಾತಂತ್ರ್ಯ ಸಿಕ್ಕಿ ಇವತ್ತಿಗೆ 78 ವರ್ಷ ಆದರೂ ಇಲ್ಲಿಯವರೆಗೆ 88.7% ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ(NCRB). ಹಾಗಾದರೆ ಇಲ್ಲಿ ಸ್ವಾತಂತ್ರ್ಯ ಯಾರಿಗೆ ? ಎಂಬ ಪ್ರಶ್ನೆ ಕಾಡುತ್ತದೆ.ಒಂದು ಹೆಣ್ಣು ಹೊಸಲು ತುಳಿದರೆ ಸಾಕು ಅದನ್ನೇ ತಪ್ಪು ಎನ್ನುವ ಸಮಾಜ,ಆಕೆಯ ಏಳಿಗೆಯನ್ನು ಸಹಿಸಲಾರರು.ಆಕೆ ವಿದ್ಯಾವಂತಳಾಗಿ ಪ್ರಶ್ನೆ ಕೇಳುವ ಸಾಮರ್ಥ್ಯ ಪಡೆದರೆ ಸಾಕು ಹೆಣ್ಣು ಮಿತಿಮೀರ ಬಾರದೆಂದು ಸಮರ್ಥನೆಗಳನ್ನು ನೀಡುತ್ತಾರೆ. ಕೆಲವೊಮ್ಮೆ ಕೊಲ್ಲಲು ಹೇಸುವುದಿಲ್ಲ.ತನಗೆ ಇಷ್ಟವಿಲ್ಲದ ಪ್ರೀತಿಯನ್ನ ತಿರಸ್ಕರಿಸಿದರೆ ಸಾಕು ಆಕೆಯ ಮೇಲೆ ಆಸಿಡ್(Acid) ಎರಚ್ಚುತ್ತಾರೆ, ಇಲ್ಲವೇ ಆಕೆಯ ಬದುಕಲ್ಲಿ ಖುಷಿ ಇಲ್ಲದಂತೆ ಮಾಡುತ್ತಾರೆ.ಹೆಣ್ಣಿಗೇಕೆ ಈ ಶಿಕ್ಷೆ? ಪ್ರೀತಿ ಎಂದರೆ, ಗೌರವ.ಅದುವೇ ಹೆಣ್ಣಿಗೆ ನೀಡದ ಗಂಡು ಆಕೆಯ ಬದುಕಿಗೆ ಯಾಕೆ ಮುಳ್ಳಾಗುತ್ತಾನೆ. ಆಕೆಗೂ ತೀರ್ಮಾನ ತೆಗೆದುಕೊಳ್ಳುವ ಹಕ್ಕಿಲ್ಲವೇ?ಆಕೆ ಯಾರನ್ನು ಪ್ರಶ್ನಿಸಲಿ ಯಾರನ್ನು ದೂರಲಿ?.ಕೇವಲ ಜೈಲುವಾಸ, ದಂಡ, ಕಾನೂನು ಕಠಿಣವಿಲ್ಲವೆಂಬ ತಾತ್ಸಾರವೇ.? ಎಲ್ಲಿ ಗಂಡು ತನ್ನ ದರ್ಪವೇ ಮೇಲುಗೈ ಸಾಧಿಸಬೇಕೆಂದು ಭಾವಿಸುತ್ತಾನೋ, ಎಲ್ಲಿ ಹೆಣ್ಣು ಗಂಡಿನ ಗುಲಾಮಳಾಗಿಯೇ ಜೀವಮಾನವಿಡಿ ಇರಬೇಕೆಂದು ಅಂದುಕೊಳ್ಳುತ್ತಾರೋ ಅಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಿರಂತರವಾಗಿರುತ್ತದೆ.
ಯಾವುದೇ ಒಂದು ದೌರ್ಜನ್ಯ ಪ್ರಕರಣ ನಡೆದರು ಹೆಣ್ಣಿನದ್ದೆ ತಪ್ಪಿರಬಹುದು ಎಂದು ಭಾವಿಸುವ ಸಮಾಜ ಗಂಡಿನ ತಪ್ಪನ್ನು ಮರೆಗೆ ಸರಿಸುತ್ತದೆ. ಇಂತಹ ಭಾವಿಸುವಿಕೆಯೇ ಗಂಡಿಗೆ ಇನ್ನಷ್ಟು ಪ್ರೇರಣೆಯಗುತ್ತದೆ.ಹೆಣ್ಣು ಭೋಗದ ವಸ್ತುವಲ್ಲ.ಆಕೆಗೂ ಒಂದು ಸುಂದರವಾದ ಬದುಕಿದೆ. ಆಕೆಗೂ ಈ ಸಮಾಜದಲ್ಲಿ ಸ್ವಾತಂತ್ರ್ಯ ವಿದೆ.ಕ್ರೂರ ಮೃಗಗಳ ಕೈಗೆ ಸಿಲುಕಿದ ಅವೆಷ್ಟು ಹೆಣ್ಣು ಮಕ್ಕಳ ಹೆತ್ತವರ ಕಣ್ಣೀರು ಇನ್ನು ಈ ಸಮಾಜದಲ್ಲಿ ಧ್ವನಿಗೂಡುತ್ತಲೇ ಇವೆ.
🖊️ ನಿಕ್ಷಿತಾ ಮರಿಕೆ.