ದೇಶ

ಲೋಕಸಭಾ ಚುನಾವಣೆ : 40 ದಿನಗಳ ಕಾಯುವಿಕೆ ಅಂತ್ಯ; ಇಂದು ಸೋಲು-ಗೆಲುವಿನ ತೀರ್ಮಾನ.

Click below to Share News

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದ 40 ದಿನಗಳ ಬಳಿಕ ಕೊನೆಗೂ ಮತ ಎಣಿಕೆ ಸನಿಹವಾಗಿದೆ.

ಸುರತ್ಕಲ್‌ನ ಎನ್‌ಐಟಿಕೆ ಮತ್ತು ಉಡುಪಿಯ ಸೈಂಟ್‌ ಸಿಸಿಲಿ ಶಾಲೆಯ ಭದ್ರತಾ ಕೊಠಡಿಯಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ಹುದುಗಿರುವ ಮತಗಳು ಕ್ಷೇತ್ರದ ಮತದಾರರ ಒಲವೆತ್ತ ಎನ್ನುವುದನ್ನು ಇಂದು ಶ್ರುತಪಡಿಸಲಿವೆ.
ಬಿಗಿ ಭದ್ರತೆಯ ನಡುವೆ ಬೆಳಗ್ಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಬಹುತೇಕ ಮಧ್ಯಾಹ್ನದ ಸುಮಾರಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಮೊದಲಿಗೆ ಬೆಳಗ್ಗೆ 8ರಿಂದ ಅಂಚೆ ಮತಗಳ ಎಣಿಕೆ ನಡೆಯಲಿದೆ, 8.30ರಿಂದ ಇವಿಎಂ ಮತ ಎಣಿಕೆ ನಡೆಯಲಿದೆ. ಇವಿಎಂಗಳ ಮತ ಎಣಿಕೆಯು ಪ್ರತೀ ವಿಧಾನಸಭಾ ಕ್ಷೇತ್ರವಾರು 8 ಕೊಠಡಿಗಳಲ್ಲಿ ತಲಾ 14 ಟೇಬಲ್‌ಗ‌ಳಂತೆ ಒಟ್ಟು 112 ಟೇಬಲ್‌ಗ‌ಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ.

ಇವಿಎಂ ಮತ ಎಣಿಕೆಗಾಗಿ ಚುನಾವಣಾಧಿಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ
ಮಾಡಲಾಗಿದೆ. ಪ್ರತೀ ಮೇಜಿಗೆ ಓರ್ವ ಸಹಾಯಕ ಚುನಾವಣಾ ಧಿಕಾರಿ, ಮೇಲ್ವಿಚಾರಕ, ಇಬ್ಬರು ಸಹಾಯಕರು, ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್‌ ಇರುತ್ತಾರೆ. ಎಣಿಕೆ ಸಿಬಂದಿಗೆ ರ್‍ಯಾಂಡಮೈಸೇಶನ್‌ ಮೂಲಕ ವಿಧಾನಸಭ ಕ್ಷೇತ್ರ ಮತ್ತು ಎಣಿಕೆ ಮೇಜನ್ನು ವಿಂಗಡನೆ ಮಾಡಲಾಗುವುದು.

ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಗರಿಷ್ಠ ಸುತ್ತು 18
ವಿಧಾನಸಭಾವಾರು ಮತ ಎಣಿಕೆಯಲ್ಲಿ ಮಂಗಳೂರು ನಗರ ಉತ್ತರದಲ್ಲಿ ಗರಿಷ್ಠ 19 ಸುತ್ತು ಇರಲಿದೆ. ಉಳಿದಂತೆ ಮಂಗಳೂರು ನಗರ ದಕ್ಷಿಣ, ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ 18 ಸುತ್ತು, ಸುಳ್ಯ 17, ಪುತ್ತೂರು ಹಾಗೂ ಮೂಡುಬಿದಿರೆ 16, ಮಂಗಳೂರಿನಲ್ಲಿ ಕನಿಷ್ಠ 15 ಸುತ್ತು ಮತ ಎಣಿಕೆ ನಡೆಯಲಿದೆ.

ವಾಹನ ಸಂಚಾರ ಇಲ್ಲ
ಎಣಿಕೆ ಕೇಂದ್ರದ ಪರಿಧಿಯಲ್ಲಿ 100 ಮೀ. ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಈ ವಲಯವನ್ನು ಪಾದಚಾರಿ ವಲಯ ಎಂದು ಘೋಷಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಎಣಿಕೆ ಕೇಂದ್ರದ ಕೊಠಡಿಯೊಳಗೆ ಸಿಸಿಟಿವಿ ಕಣ್ಗಾವಲಿರುತ್ತದೆ.

ಮೊಬೈಲ್‌, ಲೈಟರ್‌
ಇತ್ಯಾದಿ ನಿಷೇಧ
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್‌, ಐಪ್ಯಾಡ್‌, ಕ್ಯಾಲ್ಕುಲೇಟರ್‌, ಕತ್ತರಿ, ಚೂರಿ, ಲೈಟರ್‌, ಬೆಂಕಿಪೊಟ್ಟಣ, ಇಲೆಕ್ಟ್ರಾನಿಕ್‌ ವಸ್ತುಗಳು, ಶಸ್ತ್ರಾಸ್ತ್ರ, ಸ್ಫೋಟಕಗಳು ನಿಷೇಧಿಸಲ್ಪಟ್ಟಿವೆ.

ಪ್ರತ್ಯೇಕ ಬಣ್ಣದ ಪಾಸ್‌
ಮತ ಎಣಿಕೆ ಪರಿಶೀಲನೆಗೆ ಪ್ರತಿ ಅಭ್ಯರ್ಥಿಗಳಿಗೆ ಮೇಜಿಗೊಬ್ಬರಂತೆ ಒದಗಿಸಿರುವ ಎಣಿಕೆ ಏಜೆಂಟರಿಗೆ ವಿಧಾನಸಭಾವಾರು ಪ್ರತ್ಯೇಕ ಬಣ್ಣಗಳ ಏಜೆಂಟರ ಪಾಸ್‌ಗಳನ್ನು ವಿತರಿಸಲಾಗಿದೆ. ಅಭ್ಯರ್ಥಿ, ಏಜೆಂಟರು ಕೇವಲ ಪೆನ್‌, ಹಾಳೆ ನೋಟ್‌ಪ್ಯಾಡ್‌ ಹಾಗೂ 17ಸಿ ಫಾರಂ ಮಾತ್ರವೇ ಕೊಂಡೊಯ್ಯಲು ಅವಕಾಶವಿದೆ.

ದ.ಕ. 850 ಪೊಲೀಸ್‌ ನಿಯೋಜನೆ
ದ.ಕ. ಜಿಲ್ಲೆಯಲ್ಲಿ ಮತ ಎಣಿಕೆಯಂದು ಭದ್ರತಾ ವ್ಯವಸ್ಥೆಗಾಗಿ ಒಟ್ಟು 850 ಮಂದಿ ಪೊಲೀಸ್‌ ಸಿಬಂದಿ, ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗುರುತಿನ ಚೀಟಿ ಹೊಂದಿರುವವರಿಗೆ ಎಣಿಕೆ ಕೇಂದ್ರಕ್ಕೆ ಮೂರು ಹಂತದ ತಪಾಸಣೆಯ ಮೂಲಕವೇ ಪ್ರವೇಶ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಸಿಎಆರ್‌ ಹಾಗೂ ಸಿವಿಲ್‌, ಬಳಿಕ ಕೆಎಸ್‌ಆರ್‌ಪಿ, ಕೊನೆ ಹಂತದಲ್ಲಿ ಅರೆಸೇನಾ ಪಡೆಯವರ ತಪಾಸಣೆ ಇರುತ್ತದೆ. ಮೂವರು ಡಿಸಿಪಿ, 6 ಎಸಿಪಿ, 26 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ.

ಉಡುಪಿಯಲ್ಲಿ ಬಂದೋಬಸ್ತ್
ಉಡುಪಿಯ ಮತ ಎಣಿಕೆ ಕೇಂದ್ರದ ಸುತ್ತ 350 ಪೊಲೀಸರು ಹಾಗೂ ಅಧಿಕಾರಿಗಳು, 1 ಕೆಎಸ್‌ಆರ್‌ಪಿ, 1 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 1 ಅಗ್ನಿಶಾಮಕ ದಳ ವಾಹನ ಇರಲಿದೆ. ಜಿಲ್ಲೆಯಲ್ಲಿ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿಯೂ ಬಂದೋಬಸ್ತ್ಗೆ 400 ಮಂದಿ ಪೊಲೀಸರು ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 3 ಕೆಎಸ್‌ಆರ್‌ಪಿ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನಗಳನ್ನು ವಿವಿಧೆಡೆ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿ ಎದುರಾದರೆ 112 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸಿಡಿಮದ್ದು, ಪಟಾಕಿ ನಿಷೇಧ
ಫ‌ಲಿತಾಂಶದಂದು ವಿಜಯೋತ್ಸವ ಆಚರಣೆ ಸಂದರ್ಭ ಸಿಡಿಮದ್ದು, ಪಟಾಕಿ ಸಿಡಿಸುವುದನ್ನು ಜೂ. 4ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದ.ಕ. ಜಿಲ್ಲೆಯಾದ್ಯಂತ ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ಆದೇಶಿಸಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!