ಕೃಷಿ

ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದೆ, ತೆರಿಗೆ ವಿಧಿಸಲು ಗ್ರಾಪಂಗೆ ಅಧಿಕಾರವಿಲ್ಲ: ಹೈಕೋರ್ಟ್.

Click below to Share News

ಬೆಂಗಳೂರು : ಸೆ.22, ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದನ್ನು ವಾಣಿಜ್ಯ ಚಟುವಟಿಕೆ ಎಂಬುದಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯಡಿ ಯಾವುದೇ ರೀತಿಯ ವಿಧಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಜೊತೆಗೆ, ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದಕ್ಕಾಗಿ ಕಟ್ಟಡ ನಿರ್ಮಾಣ ಸಲುವಾಗಿ ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇ. ಭಾಸ್ಕರ್ ರಾವ್ ಪ್ರಕರಣದಲ್ಲಿ ಹೈಕೋರ್ಟ್ ತಿಳಿಸಿದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ – ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನೆ.

ಕೋಳಿ ಸಾಕಾಣಿಕೆ ಕೇಂದ್ರಕ್ಕಾಗಿ ನಿರ್ಮಾಣ ಮಾಡುವ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ-4ರ(ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಕೋಳಿ ಸಾಕಾಣಿಕೆ ಕೇಂದ್ರವಿರುವ ಭೂಮಿ ಕೃಷಿ ಭೂಮಿಯಾಗಿಯೇ ಮುಂದುವರೆಯಲಿದ್ದು, ಅದನ್ನು ವಾಣಿಜ್ಯ ಭೂಮಿಯನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸಬೇಕು ಎಂದೂ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲ, ಗ್ರಾಮ ಪಂಚಾಯತ್ ಜಾರಿ ಮಾಡಿದ್ದ ನೊಟೀಸ್‍ನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣ :
ಅರ್ಜಿದಾರರ ಕೆ.ನರಸಿಂಹಮೂರ್ತಿ ಅವರು, ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಸಂದ್ರ ಎಂಬ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನನ್ನು ಹೊಂದಿದ್ದು, ಈ ಭಾಗದಲ್ಲಿ ಕೋಳಿ ಸಾಕಾಣಿಕೆ ಮಾಡುವ ಸಲುವಾಗಿ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ವಿದ್ಯುತ್ ಸಂಪರ್ಕ ಪಡೆಯುವುದಕ್ಕಾಗಿ ನಿರಾಕ್ಷೇಪಣಾ ಪತ್ರಕ್ಕಾಗಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಈ ಮನವಿ ಪರಿಗಣಿಸಿದ್ದ ಪಂಚಾಯಿತಿ ಅಧಿಕಾರಿಗಳು, ಕೋಳಿ ಸಾಕಾಣಿಕೆ ಕೇಂದ್ರವು ಕೈಗಾರಿಕೆಗಳ ಅಡಿಯಲ್ಲಿ ಬರಲಿದ್ದು, ಅದನ್ನ ನಿರಾಕ್ಷೇಪಣಾ ಪತ್ರ ವಿತರಣೆ ಮಾಡುವುದಕ್ಕಾಗಿ 1.3 ಲಕ್ಷ ರೂ.ಗಳನ್ನು ಪಾವತಿ ಮಾಡಲೇಬೇಕು ಎಂದು ಸೂಚನೆ ನೀಡಿ ನೊಟೀಸ್ ನೀಡಿದ್ದರು. ಇದರಿಂದ ಅರ್ಜಿದಾರ 59,551 ಪಾವತಿ ಮಾಡಿದ್ದರು. ನಂತರ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ಕೃಷಿ ಚಟುವಟಿಕೆಗಳಾಗಿದ್ದು, ಇದಕ್ಕಾಗಿ ನಿರಾಕ್ಷೇಪಣಾ ಪತ್ರ ಪಡೆಯುವುದು ಹಾಗೂ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಈ ರೀತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಂಶ ಮನಗಂಡು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರಕಾರದ ಪರ ವಕೀಲರು, ಕೋಳಿ ಸಾಕಾಣಿಕೆ ಮಾಡುವುದು ವಾಣಿಜ್ಯ ಚಟುವಟಿಕೆಯಾಗಿದ್ದು, ಕೋಳಿ ಸಾಕಾಣಿಕೆ ಕೇಂದ್ರದ ಕಟ್ಟಡಕ್ಕೆ ವಾಣಿಜ್ಯ ತೆರಿಗೆ ವಿಧಿಸಬಹುದಾಗಿದೆ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್, ಗ್ರಾಮ ಪಂಚಾಯಿತಿಯ ನೊಟೀಸ್ ರದ್ದುಪಡಿಸಿದೆ.

ಮುಂದೆ ಓದಿ : ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ‘ಸಹಜ್ ರೈ’ ಬಳಜ್ಜ ನೇತೃತ್ವದಲ್ಲಿ ‘ಪುತ್ತೂರುದ ಪಿಲಿಗೊಬ್ಬು’ ಕಾರ್ಯಕ್ರಮ ಸಮಿತಿ ರಚನೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!