ತಾಲೂಕು ಸುದ್ದಿ

ಪುತ್ತೂರು: ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮೈತ್ರಿ ಗೆ ದಿನಗಣನೆ ಆರಂಭ.!!

Click below to Share News

ಪುತ್ತೂರು, ಫೆ.5: ಪುತ್ತಿಲ ಪರಿವಾರವನ್ನು ಬಿಜೆಪಿ ಜೊತೆ ವಿಲೀನ ಮಾಡುವ ಕುರಿತು ಮಹತ್ವದ ಸಮಾಲೋಚನಾ ಸಭೆಯನ್ನು ಪುತ್ತೂರಿನಲ್ಲಿ ನಡೆಸಲಾಗಿದ್ದು ಪರಿವಾರದ ನಾಯಕರು ಬಿಜೆಪಿ ನಾಯಕರಿಗೇ ಎಚ್ಚರಿಕೆ ನೀಡಿದ್ದಲ್ಲದೆ, ಜವಾಬ್ದಾರಿ ಸಹಿತ ಸೇರ್ಪಡೆಗೆ ಮೂರು ದಿನಗಳ ಗಡುವು ನೀಡಿದ್ದಾರೆ.

ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಬಗ್ಗೆ ನೂರಾರು ಮಂದಿ ಸೇರಿದ್ದ ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿದೆ. ಸಭೆ ನಿರ್ಣಯ ಮಂಡಿಸಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅರುಣ್ ಪುತ್ತಿಲ, ಸಭೆಯ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ಕೊಡುವ ಸಲುವಾಗಿ ಮಾತೃ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ನಿರ್ಧಾರವನ್ನು ಮೂರು ದಿನಗಳೊಳಗೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ಸಂಗತಿಯೇ ಅಲ್ಲ. ಬೇರೆ ವ್ಯವಸ್ಥೆಗಳ ಅಗತ್ಯವೂ ಇಲ್ಲ. ನಾವೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದು ರಕ್ತವನ್ನು ಬೆವರಾಗಿಸಿ ಮಾತೃ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಕಟಿಬದ್ಧನಾಗಿದ್ದೇನೆ. ಇಲ್ಲವಾದಲ್ಲಿ ಪುತ್ತೂರಿನಲ್ಲಿ ನಡೆದ ವಿದ್ಯಾಮಾನಗಳು ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಪುತ್ತೂರು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕು. ನೀಡಿದಲ್ಲಿ ಮಾತ್ರ ಮಾತೃಪಕ್ಷ ಬಿಜೆಪಿ ಜೊತೆಗೆ ಪುತ್ತಿಲ ಪರಿವಾರವನ್ನ ವಿಲೀನ ಮಾಡುತ್ತೇವೆ. ನಾವೆಲ್ಲರೂ ಬಿಜೆಪಿಗರು, ನಾವೆಲ್ಲ ಸಂಘ ಪರಿವಾರ, ನಮ್ಮ ಹಿತೈಷಿಗಳೆಲ್ಲ ಬಿಜೆಪಿಗರು, ನಮ್ಮಮತದಾರರು ಬಿಜೆಪಿಗರೇ ಆಗಿದ್ದಾರೆ. 10 ತಿಂಗಳಿನಿಂದ ಬಿಜೆಪಿ ಜೊತೆ ಸಂಧಾನ ಮಾತುಕತೆ ಮಾತ್ರ ನಡೀತಾ ಇದೆ.
ಆದ್ರೆ ಯಾವುದೇ ನಿರ್ಧಾರ ಇಲ್ಲಿಯ ವರೆಗೂ ಆಗಿಲ್ಲ. ಅರುಣ್ ಪುತ್ತಿಲರಿಗೆ ನಾಯಕತ್ವ ನೀಡಲು ವಿಫಲವಾದರೆ ನಾವೇನು ಮಾಡಬಹುದು. ದೊಡ್ಡ ರಾಜಕೀಯ ವಿಪ್ಲವ ನಡೆಯಲಿದೆ. ಜಿಲ್ಲೆಯ ರಾಜಕೀಯಕ್ಕೆ ಸುನಾಮಿ ಬರಲಿ, ಬಿರುಗಾಳಿ ಬರಲಿ, ಭೂಕಂಪವಾಗ್ಲಿ.. ನಾವೂ ಮುಂದೆ ಬರುವ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ದ. ಹಿಂದುತ್ವ ಮತ್ತು ಕೇಸರಿಯ ಗೌರವಕ್ಕೆ ಪುತ್ತಿಲ ಪರಿವಾರ ಯಾವತ್ತೂ ಸಿದ್ಧ ಎಂದು ಗುಡುಗಿದ್ದಾರೆ.


ಪುತ್ತಿಲ ಬಿಜೆಪಿ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಎಂದು ನಾಲ್ಕು ಜನ ಮಾತ್ರ ಅಡ್ಡಿ – ಶ್ರೀಕೃಷ್ಣ ಉಪಾಧ್ಯಾಯ

ಅರುಣ್ ಕುಮಾ‌ರ್ ಪುತ್ತಿಲ ಯಾರನ್ನೂ ನಾವು ಬೈದಿಲ್ಲ. ಹಾಗಾಗಿ ಯಾರಲ್ಲೂ ಕ್ಷಮೆ ಕೇಳುವ ಅವಶ್ಯಕತೆಯಿಲ್ಲ ಎಂದು ಪುತ್ತಿಲ ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿಯ ಸ್ಥಾಪಿತ ಬೆರಳೆಣಿಕೆಯ ಜನರ ವಿರೋಧವಿದೆ. ಆದರೆ ಅರುಣ್ ಪುತ್ತಿಲ ಹಿಂದೆ ಬಹುದೊಡ್ಡ ಪಡೆ ಇದೆ. ಆ ಕಾರಣದಿಂದಲೇ ಪುತ್ತೂರಿನ ಚುನಾವಣೆ ಹೈಲೈಟ್ ಆಗಿದೆ. ಪುತ್ತಿಲ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಎಂದು ನಾಲ್ಕು ಜನ ಮಾತ್ರ ಅಡ್ಡಿ ಬಿಟ್ರೆ 32000 ಜನರ ವಿರೋಧವೇ ಇಲ್ಲ ಎಂದರು. ವೇದಿಕೆಯಲ್ಲಿ ಪುತ್ತಿಲ ಪರಿವಾರದ ಸಲಹೆಗಾರ ಶಶಾಂಕ ಕೊಟೇಚಾ, ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾನೂನು ಸಲಹೆಗಾರ ರಾಜೇಶ್ ಆರ್ಲಪದವು, ನಗರ ಅಧ್ಯಕ್ಷ ಅನಿಲ್‌ ತೆಂಕಿಲ ಪಸ್ಥಿತರಿದ್ದರು. ರವಿ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!