ಲೋಕಸಭಾ ಚುನಾವಣೆ : ಈವರೆಗೆ ನಡೆದ 4 ಹಂತದ ಮತದಾನದಲ್ಲಿ 45.1 ಕೋಟಿ ಜನರಿಂದ ಹಕ್ಕು ಚಲಾವಣೆ.
ಬೆಂಗಳೂರು: ಲೋಕಸಭಾ ಚುನಾವಣೆ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈವರೆಗೂ ನಡೆದಿರುವ ನಾಲ್ಕು ಹಂತದ ಮತದಾನದಲ್ಲಿ 45.1 ಕೋಟಿ ಜನ ತಮ ಹಕ್ಕು ಚಲಾಯಿಸಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಮುಂದಿನ ಹಂತದಲ್ಲಿ ಮೇ 20, 25, ಜೂನ್ 1 ರಂದು ನಡೆಯುವ ಕ್ರಮವಾಗಿ 5, 6, 7 ನೇ ಹಂತದ ಮತದಾನದಲ್ಲಿ ಮತ್ತಷ್ಟು ಜನ ಮುಂದಾಗಬೇಕು ಎಂದು ಆಯೋಗ ಮನವಿ ಮಾಡಿದೆ.
ಈವರೆಗೂ ಸರಾಸರಿ ಶೇ.66.95 ರಷ್ಟು ಮತದಾನವಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಲು ಮುಂದಿನ ಹಂತದ ಚುನಾವಣೆಯಲ್ಲಿ ಸಾರ್ವಜನಿಕರು ಮತ್ತಷ್ಟು ಆಸಕ್ತಿ ವಹಿಸಬೇಕು ಎಂದು ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮನವಿ ಮಾಡಿದ್ದಾರೆ.
ದೂರಸಂಪರ್ಕ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಯೊಬ್ಬ ಮತದಾರರ ಮೊಬೈಲ್ ಸಂಖ್ಯೆಗೂ ಕರೆ ಮಾಡಲಾಗುತ್ತದೆ, ಎಸ್‌ಎಂಎಸ್, ವಾಟ್ಸಪ್ ಸಂದೇಶಗಳು ರವಾನೆಯಾಗುತ್ತಿದೆ. ಬಿಸಿಸಿಐ ಜೊತೆ ಒಡಂಬಡಿಕೆ ಮಾಡಿಕೊಂಡು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಸಾಮಾಜಿಕ ಜಾಲಾತಾಣಗಳ ಸಹಕಾರ ಪಡೆಯಲಾಗಿದ್ದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯದ ಸಹಯೋಗದಲ್ಲಿ ಚುನಾವ್ಕ ಪರ್ವ ದೇಶ್ ಕ ಗರ್ವ್ ಎಂಬ ಸಂದೇಶವನ್ನು ಸಾರಲಾಗುತ್ತಿದೆ. ರೈಲ್ವೆ ಟಿಕೆಟ್, ಅಂಚೆ, ಎಟಿಎಂ ಸೇವೆಗಳಲ್ಲೂ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅಂಚೆ ಇಲಾಖೆಯ 1.60 ಲಕ್ಷ ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಎಟಿಎಂಗಳು, ಸಾವಿರಕ್ಕೂ ಹೆಚ್ಚು ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಮತ ಜಾಗೃತಿ ಮೂಡಿಸಲಾಗುತ್ತಿದೆ. 1.63 ಲಕ್ಷ ಶಾಖೆಗಳ ಸಹಯೋಗದಲ್ಲಿ 2.2 ಲಕ್ಷ ಎಟಿಎಂ ಕೇಂದ್ರಗಳನ್ನು ಮತ ಜಾಗೃತಿಗಾಗಿ ಉಪಯೋಗಿಸಲಾಗಿದೆ. ಅಮೂಲ್ ಡೇರಿ ಉತ್ಪನ್ನಗಳ ಮೇಲೆ ಸಂಸತ್ ಟಿವಿಯಲ್ಲಿ, ಚಿತ್ರಮಂದಿರಗಳಲ್ಲಿ, ಪ್ರಸಾರಭಾರತಿಯಲ್ಲಿ ಮ್ಯೂಸಿಕ್ ಬೈಕ್ ಸೇವೆ ಆಯಪ್‌ಗಳಲ್ಲಿ ಫೋನ್ ಪೇ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲೂ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ವಿವರಿಸಿದ್ದಾರೆ.