ಉದ್ಯೋಗ

ಮಂಗಳೂರು : “ಆಳ್ವಾಸ್ ಪ್ರಗತಿ-2023” ಬೃಹತ್ ಉದ್ಯೋಗ ಮೇಳ.

Click below to Share News

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಅ.6 ಮತ್ತು 7ರಂದು ಹಮ್ಮಿಕೊಂಡಿರುವ ‘ಆಳ್ವಾಸ್ ಪ್ರಗತಿ-2023’ ಉದ್ಯೋಗ ಮೇಳದಲ್ಲಿ ಗಲ್ಫ್ ದೇಶದ ಕಂಪನಿಗಳು ಸೇರಿದಂತೆ ಒಟ್ಟು 192 ಕಂಪನಿಗಳು ಭಾಗವಹಿಸಲಿದ್ದು, 13,605 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ನಡೆಯುವ ಮೇಳದಲ್ಲಿ ಗಲ್ಫ್‌ನ ಎಕ್ಸ್‌ಪರ್ಟೈಸ್ ಮತ್ತು ಬುರ್ಜಿಲ್ ಹೋಲ್ಡಿಂಗ್ಸ್, ದುಬೈನ ಭವಾನಿ ಗ್ರೂಪ್‌ ಕಂಪನಿಗಳು ಉತ್ತಮ ಪ್ಯಾಕೇಜ್‌ನೊಂದಿಗೆ ಪದವೀಧರರನ್ನು ನೇಮಕ ಮಾಡಿಕೊಳ್ಳಲಿವೆ. ಫ್ಯಾಕ್ಟ್‌ಸೆಟ್‌ ಸಿಸ್ಟಮ್ ಇಂಡಿಯಾ ಕಂಪನಿಯು ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ ಪದವೀಧರರಿಗೆ ಹೈದರಾಬಾದ್‌ನಲ್ಲಿ ವಾರ್ಷಿಕ ₹7.1 ಲಕ್ಷ ಪ್ಯಾಕೇಜ್‌ನ ಉದ್ಯೋಗ ನೀಡಲಿದೆ’ ಎಂದರು.

ಸುಮಾರು 25 ಕಂಪನಿಗಳು 250ಕ್ಕೂ ಹೆಚ್ಚು ಉದ್ಯೋಗಗಳನ್ನು ಮೆಕ್ಯಾನಿಕಲ್ ಪದವೀಧರರಿಗೆ ನೀಡಲಿದ್ದು, 15 ಕಂಪನಿಗಳು 52 ಹುದ್ದೆಗಳನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರರಿಗೆ ನೀಡಲಿವೆ. ಏಸ್‌ ಡಿಸೈನರ್ಸ್, ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್, ಅಜಾಕ್ಸ್ ಎಂಜಿನಿಯರಿಂಗ್, ಟೊಯೊಟೊ ಇಂಡಸ್ಟ್ರೀಸ್ ಎಂಜಿನ್‌ ಇಂಡಿಯಾ, ಬುಲ್ಲರ್ ಇಂಡಿಯಾ, ಸ್ವಿಚ್‌ಗೇರ್ ಮತ್ತಿತರ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 1,700ರಷ್ಟು ಹುದ್ದೆ ಭರ್ತಿ ಮಾಡಿಕೊಳ್ಳಲಿವೆ. ಐಟಿಐ ವಿದ್ಯಾರ್ಥಿಗಳಿಗೆ 1,682, ವಾಣಿಜ್ಯ, ವಿಜ್ಞಾನ, ಕಲಾ ಪದವೀಧರರಿಗೆ 3,477ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ. ಫಾರ್ಮಾ ಕಂಪನಿಗಳಲ್ಲಿ 303 ಹುದ್ದೆಗಳು, ಕೋರ್ ಐಟಿ ಕಂಪನಿಗಳಲ್ಲಿ 500ಕ್ಕೂ ಹೆಚ್ಚು ಹುದ್ದೆಗಳ ಭರ್ತಿ ನಡೆಯಲಿದೆ ಎಂದು ವಿವರಿಸಿದರು.


ಆರೋಗ್ಯ ಕ್ಷೇತ್ರದಲ್ಲಿ 559 ಹುದ್ದೆಗಳು, ಜ್ಯುವೆಲ್ಲರಿ ಮಾರಾಟ ವಲಯದಲ್ಲಿ 3,367, ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲಿ 1,808, ಫೈನಾನ್ಸ್‌ ಕ್ಷೇತ್ರದಲ್ಲಿ 976 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ದೂರದ ಊರುಗಳಿಂದ ಬರುವ ಸುಮಾರು 1,500ರಷ್ಟು ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆನ್‌ಲೈನ್ ನೋಂದಣಿ ಕಡ್ಡಾಯವಾಗಿದ್ದು, ಮಾಹಿತಿಗೆ

ವೆಬ್‌ಸೈಟ್: www.alvaspragati.com ಸಂಪರ್ಕ ಸಂಖ್ಯೆ: 9008907716, 9663190590 ಸಂಪ‌ರ್ಕಿಸಬಹುದು. ನೋಂದಣಿ : https://alvaspragati.com/CandidateRegistrationPage ಇಲ್ಲಿ ಮಾಡಬಹುದು ಎಂದು ವಿವೇಕ್‌ ಆಳ್ವ ತಿಳಿಸಿದರು.

ಉದ್ಘಾಟನೆ.
ಅ.6ರಂದು ಬೆಳಿಗ್ಗೆ 9.30ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮೇಳ ಉದ್ಘಾಟಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸುವರು. ಬುರ್ಜಿಲ್ ಹೋಲ್ಡಿಂಗ್ಸ್‌ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಸಂಜಯ್ ಕುಮಾರ್, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್‌ನ ಮಾನವ ಸಂಪನ್ಮೂಲ ವಿಭಾಗದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಫ್ಯಾಕ್ಟ್‌ಸೆಟ್‌ ಸಿಸ್ಟಮ್ ಇಂಡಿಯಾದ ಉಪಾಧ್ಯಕ್ಷ ಅನುಪ್ಮ ರಂಜನ್ ಭಾಗವಹಿಸುವರು ಎಂದು ಹೇಳಿದರು.

ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.


Click below to Share News

Leave a Reply

Your email address will not be published. Required fields are marked *

Back to top button
error: Content is protected !!