ದೇಶ

ಪುತ್ತೂರಿನ ಸಾವಯವ ‘ಕೋಕೊ ಪಾಡ್ಸ್’ ಚಾಕ್ಲೇಟ್‌ಗೆ ದೇಶಾದ್ಯಂತ ಬೇಡಿಕೆ.

Click below to Share News

ಪುತ್ತೂರು.ಆ.10: ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಪುತ್ತೂರಿನ ದಂಪತಿಯೊಬ್ಬರು ಮನೆಯಲ್ಲೇ ಹವ್ಯಾಸದ ರೀತಿಯಲ್ಲಿ ಆರಂಭಿಸಿದ ಕೊಕ್ಕೋ ಚಾಕಲೇಟ್ ಇಂದು `ಕೋಕೊ ಪಾಡ್ಸ್’ ಎಂಬ ಬ್ರ‍್ಯಾಂಡ್ ನೇಮ್‌ನೊಂದಿಗೆ ಉದ್ಯಮದ ಸ್ವರೂಪ ಪಡೆದುಕೊಂಡಿದ್ದು, ದೇಶಾದ್ಯಂತ ಪೂರೈಕೆಯಾಗುವಷ್ಟು ಮಟ್ಟಿಗೆ ಬೆಳೆದಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮಚ್ಚಿಮಲೆಯ ಕೇಶವಮೂರ್ತಿ ಮಚ್ಚಿಮಲೆ ಮತ್ತು ಪೂರ್ಣಶ್ರೀ ದಂಪತಿಯ ಯಶೋಗಾಥೆ. ಚಾಕಲೇಟ್‌ಗಳನ್ನು ಅವರು ಈಗಲೂ ತಮ್ಮ ಕೈಯಾರೆ ತಯಾರಿಸುತ್ತಾರೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ನೂರು ಪ್ರತಿಶತ ಸಾವಯವ- ದೇಸಿ ಸ್ವಾದದ ಸ್ವಾದಿಷ್ಟ ಡಾರ್ಕ್ ಚಾಕಲೇಟ್‌ಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೇಶವಮೂರ್ತಿ ಮತ್ತು ಪೂರ್ಣಶ್ರೀ, 2020ರ ಕೊರೋನಾ ಅವಧಿಯಲ್ಲಿ ಲಾಕ್‌ಡೌನ್ ಘೋಷಿಸಿದಾಗ `ವರ್ಕ್ -ಫ್ರಂ ಹೋಮ್’ಗಾಗಿ ಮಚ್ಚಿಮಲೆಯ ಮನೆಗೆ ಆಗಮಿಸಿದ್ದರು. ಲಾಕ್‌ಡೌನ್ ಕಾರಣದಿಂದ ಅವರ ತೋಟದಲ್ಲಿ ಸಾಕಷ್ಟಿದ್ದ ಕೊಕ್ಕೊ ಬೆಳೆಗೆ ಮಾರುಕಟ್ಟೆ ಇಲ್ಲದೆ ವ್ಯರ್ಥವಾಗುತ್ತಿದ್ದುದನ್ನು ಗಮನಿಸಿದ ಅವರು, ಕೊಕ್ಕೋ ಬೀಜದಿಂದ ತಾವೇ ಚಾಕೋಲೇಟ್ ಮಾಡುವ ಯೋಚನೆ ಮಾಡಿದರು. ಆದರೆ ಹೇಗೆ ತಯಾರಿಸುವುದು ಎನ್ನುವುದು ಗೊತ್ತಿರಲಿಲ್ಲ. ಯೂಟ್ಯೂಬ್, ಬ್ಲಾಗ್‌ಗಳು, ವೆಬ್‌ಸೈಟ್‌ಗಳ ಮಾಹಿತಿ ಆಧರಿಸಿ ತಯಾರಿಸಿದಾಗ ಸ್ನೇಹಿತರು, ಬಂಧುಬಳಗದವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅದೇ ಮುಂದೆ ದೊಡ್ಡ ಪ್ರಮಾಣದಲ್ಲಿ ಚಾಕಲೇಟ್ ತಯಾರಿಸಲು ಪ್ರೇರಣೆ ನೀಡಿತು.
ನಂತರದ ದಿನಗಳಲ್ಲಿ ಚಾಕಲೇಟ್ ತಯಾರಿ ಹಾಗೂ ಪ್ಯಾಕಿಂಗ್ ಇತ್ಯಾದಿಗಳಿಗೆ ಅಗತ್ಯವಾಗಿ ಬೇಕಾದ ಉಪಕರಣಗಳನ್ನು ಖರೀದಿಸಿ, `ಕೊಕೊ ಪಾಡ್ಸ್’ ಹೆಸರಿನಲ್ಲಿ ವಿವಿಧ  ಫ್ಲೇವರ್‌ಗಳಲ್ಲಿ ಆನ್‌ಲೈನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಅದಕ್ಕಾಗಿ ಇನ್‌ಸ್ಟಾಗ್ರಾಂ, -ಫೇಸ್‌ಬುಕ್‌ನಲ್ಲೂ ಖಾತೆ ತೆರೆದಿದ್ದಾರೆ. ಆರಂಭದಲ್ಲಿ ತಿಂಗಳಿಗೆ 10-15 ಚಾಕಲೇಟ್‌ಗಳು ಮಾರಾಟವಾಗುತ್ತಿದ್ದರೆ, ಈಗ ಏನಿಲ್ಲವೆಂದರೂ 200-250 ಚಾಕಲೇಟ್‌ಗಳಿಗೆ ದೇಶಾದ್ಯಂತ ಬೇಡಿಕೆ ಬರುತ್ತಿದೆ. ಕೆಲವೊಮ್ಮ ಮಾಸಿಕ 500ಕ್ಕೂ ಅಧಿಕ ಚಾಕಲೇಟ್‌ಗಳನ್ನು ತಯಾರಿಸಿ, ಮಾರಿದ್ದಾರೆ. ದೇಶದ ಎಲ್ಲ ರಾಜ್ಯಗಳ ಜನರಿಗೆ ಚಾಕಲೇಟ್ ರವಾನೆ ಯಾಗುತ್ತಿದೆ.

ಸಾವಯವ, ದೇಸಿ ಸ್ವಾದ : ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಬಹುತೇಕ ಚಾಕಲೇಟ್‌ಗಳಲ್ಲಿ ರಾಸಾಯನಿಕಗಳು ಹಾಗೂ ಕೃತಕ ಫ್ಲೇವರ್ಸ್ ಬಳಸುತ್ತಾರೆ. ಅದರಲ್ಲಿ ಕೊಕ್ಕೊ ಪ್ರಮಾಣವೂ ಕಡಿಮೆ ಇರುತ್ತದೆ. ಆದರೆ ಕೇಶವಮೂರ್ತಿ ಅವರ `ಕೊಕೊ ಪಾಡ್ಸ್’ ಚಾಕಲೇಟ್‌ಗಳಲ್ಲಿ (KOKO PODS Chocolate) ಯಾವುದೇ ಕೃತಕ – ಫ್ಲೇವರ್ಸ್, ರಾಸಾಯನಿಕ ಬಳಕೆ ಮಾಡಲ್ಲ. ಬನಾನಾ, ಆರೇಂಜ್, ಬಾದಾಮಿ, ಪೈನಾಪಲ್, ಶುಂಠಿ ಇತ್ಯಾದಿ ಹಲವು – ಫ್ಲೇವರ್ಸ್ ಚಾಕೋಲೇಟ್ ತಯಾರಿಸುತ್ತಾರೆ. ಅವೆಲ್ಲದಕ್ಕೂ ಆಯಾ ಹಣ್ಣು ಅಥವಾ ಬೀಜಗಳನ್ನೇ ಬಳಸಿ ನೈಸರ್ಗಿಕ -ಫ್ಲೇವರ್ಸ್‌ನೊಂದಿಗೆ ತಯಾರಿಸುವುದು ಇವರ ಹೆಚ್ಚುಗಾರಿಕೆ. ಅಲ್ಲದೇ, ಕೊಕ್ಕೊ ಪ್ರಮಾಣವನ್ನು ಶೇ.60ರಿಂದ ಶೇ. 100ರವರೆಗೆ ಬಳಸಿ ವಿವಿಧ ಬಗೆಯ ಚಾಕಲೇಟ್‌ಗಳು, ಸಕ್ಕರೆ ಹಾಗೂ ಬೆಲ್ಲ ಮಿಶ್ರಣದ ಚಾಕಲೇಟ್‌ಗಳನ್ನೂ ತಯಾರಿಸುತ್ತಿದ್ದಾರೆ. ಹಾಗಾಗಿ ಈ ಚಾಕಲೇಟ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಲಾಕ್‌ಡೌನ್ ಮುಕ್ತಾಯದ ಬಳಿಕ ಕೇಶವಮೂರ್ತಿ ದಂಪತಿ ಬೆಂಗಳೂರಿಗೆ ಉದ್ಯೋಗಕ್ಕೆ ಮರಳಿದ್ದಾರೆ. ಆಗಾಗ ಊರಿಗೆ ಬಂದು ಚಾಕೋಲೇಟ್ ತಯಾರಿಸಿ ಕೊಂಡೊಯ್ಯುತ್ತಾರೆ. ಸ್ಟಾಕ್ ಖಾಲಿಯಾದಾಗ ಮತ್ತೆ ಊರಿಗೆ ಬಂದು ತಯಾರಿಸುತ್ತಾರೆ. ಕೊಕ್ಕೊ ಹಣ್ಣನ್ನು ಕಿತ್ತ ಬಳಿಕ ಬೀಜ ತೆಗೆದು ಸಂಸ್ಕರಿಸಿ, ಐದಾರು ದಿನ ಒಣಗಿಸಿ, ಹುರಿದು ಮತ್ತಿತರ ಪ್ರಕ್ರಿಯೆಗಳನ್ನು ಮುಗಿಸಿ ಚಾಕಲೇಟ್ ಮಾಡಲು 20 ದಿನಗಳ ಕೆಲಸವಾದರೂ ಇದೆ. ಈ ಕೆಲಸಗಳಿಗೆ ಕೇಶವಮೂರ್ತಿ ಅವರ ತಂದೆ, ತಾಯಿ ಸಹಾಯ ಮಾಡುತ್ತಾರೆ. ತಮ್ಮದೇ ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ ಸ್ಟಾರ್ಟ್ಅಪ್ ಉದ್ಯಮವಾಗಿಸಲು ಬಯಸುವ ಯುವಕರಿಗೆ ಕೇಶವಮೂರ್ತಿ ದಂಪತಿ ಪ್ರೇರಣೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!