ದೇಶ

‘ಆಪರೇಷನ್ ಅಜಯ್’ ಕಾರ್ಯಾಚರಣೆ : ಇಸ್ರೇಲ್‌ನಿಂದ 212 ಭಾರತೀಯರು ತಾಯ್ನಾಡಿಗೆ ವಾಪಸ್..!

ನವದೆಹಲಿ : ಯುದ್ಧ ಪೀಡಿತ ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ‘ಆಪರೇಷನ್ ಅಜಯ್’ ಎಂಬ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಇದರ ಭಾಗವಾಗಿ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ದೆಹಲಿ ತಲುಪಿದೆ.

ಒಂದು ಮಗು ಸೇರಿದಂತೆ 212 ಭಾರತೀಯ ಪ್ರಯಾಣಿಕರನ್ನು ಹೊತ್ತ ವಿಮಾನ ಗುರುವಾರ ರಾತ್ರಿ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ‘ಆಪರೇಷನ್ ಅಜಯ್’ ಅಡಿಯಲ್ಲಿ ಹೊರಟಿತ್ತು. ಇಂದು (ಅ.13) ಮುಂಜಾನೆ ದೆಹಲಿ ತಲುಪಿದೆ. ವರದಿಗಳ ಪ್ರಕಾರ, ಪ್ರಯಾಣಿಕರನ್ನು ‘ಮೊದಲು ಬಂದವರಿಗೆ ಮೊದಲು ಸೇವೆ’ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ಮಾಧ್ಯಮಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಮಾನ ನಿಲ್ದಾಣದಲ್ಲಿ ಭಾರತೀಯರನ್ನು ಬರ ಮಾಡಿಕೊಂಡಿರುವುದನ್ನು ಕಾಣಬಹುದು.
ಗುರುವಾರ ರಾತ್ರಿ ಎಕ್ಸ್ ನಲ್ಲಿ (ಟ್ವಿಟ್ಟರ್) ಇಸ್ರೇಲ್ ನಿಂದ ಭಾರತಕ್ಕೆ ಹೊರಟಿದ್ದ ಮೊದಲ ತಂಡದ ಫೋಟೋ ಹಂಚಿಕೊಂಡಿದ್ದ ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್. ಜೈಶಂಕರ್, “ಆಪರೇಷನ್ ಅಜಯ್ ಚಾಲನೆಯಲ್ಲಿದೆ. 212 ನಾಗರಿಕರು ವಿಮಾನದ ಮೂಲಕ ನವದೆಹಲಿಯ ಮಾರ್ಗದಲ್ಲಿದ್ದಾರೆ” ಎಂದು ತಿಳಿಸಿದ್ದರು.

ಅಕ್ಟೋಬರ್ 7ರಂದು ಪ್ಯಾಲೆಸ್ತೀನ್ ನ ಗಾಜಾದ ಹಮಾಸ್ ಗುಂಪು ಇಸ್ರೇಲ್ ನ ಟೆಲ್ ಅವೀವ್ ನಗರದ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ, ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲಿನ ದಾಳಿ ಮುಂದುವರಿಸಿದೆ. ಇದರಿಂದ ಎರಡೂ ರಾಷ್ಟ್ರಗಳಲ್ಲಿ ಸುಮಾರು 3,600ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಾಗಾಗಿ, ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಅ.11ರಂದು ಆಪರೇಷನ್ ಅಜಯ್ ಪ್ರಾರಂಭಿಸಿದೆ. ಇದರ ಮೂಲಕ ಇಸ್ರೇಲ್ ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಸಾಗಲು ವಿಶೇಷ ವಿಮಾನ ಗಳನ್ನು ಒದಗಿಸಿದೆ.

5 ಕನ್ನಡಿಗರು ತವರಿಗೆ: ಇಸ್ರೇಲ್‌ನಿಂದ ಭಾರತ ಸರ್ಕಾರ ಕರೆತಂದಿರುವ 212 ಭಾರತೀಯರ ಮೊದಲ ತಂಡದಲ್ಲಿ 5 ಮಂದಿ ಕನ್ನಡಿಗರಿದ್ದಾರೆ ಎನ್ನಲಾಗುತ್ತಿದೆ.

ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಜಯೇಶ್ ತಾಕರ್ಶಿ, ಅಶ್ವಿನಿ ಕೃಷ್ಣ, ಕಲ್ಪನಾ ಗೋಪಾಲ್, ಪ್ರೀತಿ ರಾಜಮನ್ನಾರ್, ಈರಣ್ಣ ಅವರು ಶುಕ್ರವಾರ ದೆಹಲಿಗೆ ಸುರಕ್ಷಿತರಾಗಿ ತಲುಪಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!