ಕ್ರೀಡೆ

ಗುಜರಾತ್ ಟೈಟನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ರನ್‌ಗಳ ಜಯ ದಾಖಲಿಸಿ ಫೈನಲ್ ಗೆ

ಚೆನ್ನೈ: ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಮೇ 23) ನಡೆದ ಹೈ ವೋಲ್ವೇಜ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡವನ್ನು 15 ರನ್‌ಗಳ ಅಂತರದಲ್ಲಿ ಬಗ್ಗುಬಡಿಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲೆಯ 10ನೇ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟ ಸಾಧನೆ ಮೆರೆದಿದೆ.

ಕ್ವಾಲಿಫೈಯರ್ 1 ಹಣಾಹಣಿಯಲ್ಲಿ ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡುವಂತ್ತಾಯಿತು. ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಿಎಸ್‌ಕೆ ಮೊತ್ತ ದಾಖಲಿಸಿತು. ಓಪನರ್‌ಗಳಾದ ಋತುರಾಜ್ ಗಾಯಕ್ವಾಡ್ (60) ಮತ್ತು ಡೆವೋನ್ ಕಾನ್ವೇ (40) ಮೊದಲ ವಿಕೆಟ್‌ಗೆ 87 ರನ್‌ಗಳನ್ನು ಒಗ್ಗೂಡಿಸಿ ತಂಡದ ದೊಡ್ಡ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿತು. ಟೈಟನ್ಸ್ ತಂಡದ ವೇಗಿಗಳ ಮೊಹಮ್ಮದ್ ಶಮಿ ಮತ್ತು ಮೋಹಿತ್ ಶರ್ಮಾ ತಲಾ ವಿಕೆಟ್ ಕಿತ್ತು, ಸಿಎಸ್‌ಕೆ ಬ್ಯಾಟರ್‌ಗಳ ಅಬ್ಬರಕ್ಕೆ ಕೊಂಚ ಬ್ರೇಕ್ ಹಾಕಿದರು. ಆದರೂ, ಸ್ಲಾಗ್ ಓವರ್‌ಗಳಲ್ಲಿ ರವೀಂದ್ರ (22) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸಿಎಸ್ ಗಡಿ ದಾಟಿತು. 20 ಓವರ್‌ಗಳಲ್ಲಿ 172/7 ರನ್ ಕಲೆಹಾಕಿತು.

ಟೂರ್ನಿಯುದ್ದಕ್ಕೂ ರನ್ ಚೇಸಿಂಗ್‌ನಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್, ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುರಿ ಬೆನ್ನತ್ತಿ ಮುಗ್ಗರಿಸಿತು. ಸಿಎಸ್ ಕ್ಯಾಪ್ಟನ್ ಎಂಎಸ್ ಧೋನಿ ರಚಿಸಿದ್ದ ಫೀಲ್ಡಿಂಗ್ ವ್ಯೂಹ ಮತ್ತು ಬೌಲರ್‌ಗಳಿಂದ ಮೂಡಿಬಂದ ಕಟ್ಟುನಿಟ್ಟಿನ ದಾಳಿ ಎದುರು ಟೈಟನ್ಸ್ ರನ್ ಹೆಕ್ಕಲು ತಡಬಡಾಯಿಸಿತು. ಇನ್ ಫಾರ್ಮ್ ಓಪನರ್ ಶುಭಮನ್ ಗಿಲ್ (42) ಮತಯ್ತು ಇನಿಂಗ್ಸ್ ಅಂತ್ಯದಲ್ಲಿ ರಶೀದ್ ಖಾನ್ (30) ಹೋರಾಡಿದರೂ, ಟೈಟನ್ಸ್ 157 ರನ್‌ಗಳಿಗೆ ಆಲ್‌ಔಟ್ ಆಯಿತು. ಸಿಎಸ್‌ಕೆ ಪರ ದೀಪಕ್ ಚಹ, ಮತೀಶ ಪತಿರಣ, ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಉರುಳಿಸಿ ಚೆನ್ನೈಗೆ ಜಯದ ಮಾಲೆ ತೊಡಿಸಿದರು.ಫೈನಲ್ ತಲುಪಲು ಟೈಟನ್ಸ್‌ಗೆ ಮತ್ತೊಂದು ಅವಕಾಶ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸಿಎಸ್‌ಕೆ ಎದುರು ಮುಗ್ಗರಿಸಿದರೂ, ಫೈನಲ್‌ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶ ಹೊಂದಿದೆ. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದ ವಿನ್ನರ್ ಎದುರು ಫೈನಲ್ ಅರ್ಹತೆಗಾಗಿ ಪೈಪೋಟಿ ನಡೆಸಲಿದೆ. ಮೇ 24ರಂ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಮತ್ತು ಲಖನೌ ಸೂಪರ್ ಜಯಂಟ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಇಲ್ಲಿ ಗೆದ್ದ ತಂಡಕ್ಕೆ ಗುಜರಾತ್ ಟೈಟನ್ಸ್ ಸವಾಲು ಎದುರಾಗಲಿದೆ. ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 28ರಂದು ನಡೆಯಲಿದೆ.

Leave a Reply

Your email address will not be published. Required fields are marked *

Back to top button
error: Content is protected !!