ರಾಜ್ಯ

ಸೈಬರ್‌ ಕ್ರೈಂನ ʼಡಿಜಿಟಲ್‌ ಅರೆಸ್ಟ್‌ʼ(digital arrest)ನಲ್ಲಿ ಒಂದೇ ರಾತ್ರಿಗೆ 59 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ವ್ಯಕ್ತಿ!

ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರಿನಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಸೈಬರ್‌ ಕ್ರೈಂ ದರೋಡೆಕೋರರ ಡಿಜಿಟಲ್‌ ಕೋರ್ಟ್‌ ಕಟಕಟೆಯಲ್ಲಿ ಸಿಲುಕಿಕೊಂಡು ರಾತ್ರೋರಾತ್ರಿ ಬರೋಬ್ಬರಿ 59 ಲಕ್ಷರೂ.ಕಳೆದುಕೊಂಡಿದ್ದಾರೆ.

ಆ ಮೂಲಕ ಕರ್ನಾಟಕದಲ್ಲಿ ಈ ರೀತಿ ಸಿಬಿಐ, ಇಡಿ ಅಥವಾ ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಬಂದು ಡಿಜಿಟಲ್‌ ಕೋರ್ಟ್‌ನಲ್ಲಿ ಬಂಧನಕ್ಕೆ ಒಳಗಾಗಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಮೋಸ ಹೋಗುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ.
ಒಂದು ತಿಂಗಳ ಹಿಂದೆಯಷ್ಟೇ ಉಡುಪಿಯಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರನ್ನು ಇದೇ ರೀತಿಯ ವರ್ಚುವಲ್‌ ಕೋರ್ಟ್‌ ಸೃಷ್ಟಿ ಮಾಡಿ ಅದರೊಳಗೆ ಬರೋಬ್ಬರಿ ಏಳು ದಿನಗಳ ಕಾಲ ಕೂಡಿ ತಮ್ಮ ಖಾತೆಯಿಂದ ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಲಪಟಾಯಿಸಿದ್ದರು. ಆದರೆ, ಈ ರೀತಿಯ ಎಷ್ಟೇ ಘಟನೆಗಳು ನಡೆಯುತ್ತಿದ್ದರೂ ಬೇರೆಯವರು ಅಂಥ ಘಟನೆಗಳಿಂದ ಪಾಠ ಕಲಿತು ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವುದು ನಿಜಕ್ಕೂ ಗಂಭೀರ ಹಾಗೂ ವಾಸ್ತವ ವಿಚಾರವೂ ಹೌದು. ಅದೇರೀತಿ, ಸೈಬರ್‌ ಕ್ರೈಂ ವಂಚಕರ ಅತ್ಯಂತ ಲೇಟೆಸ್ಟ್‌ ಆಗಿರುವ ಡಿಜಿಟಲ್‌ ಅಥವಾ ವರ್ಚುವಲ್‌ ಕೋರ್ಟ್‌ನ ಮೋಸದ ಜಾಲದಲ್ಲಿ ಸಿಲುಕಿಕೊಂಡು 59 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಸಿವಿ ರಾಮನ್‌ ನಗರದ ಕೆಜಿ ರಾವ್‌ ಎಂಬ ವ್ಯಕ್ತಿಯು ಸೆ.12ರಂದು ಸೈಬರ್‌ ವಂಚಕರ ಜಾಲದಲ್ಲಿ ಅಕ್ಷರಶಃ ಬಂಧಿಯಾಗಿ ಅರ್ಧ ಕೋಟಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಅಂದರೆ, ಅವರು ಸೆ.2ರ ಬೆಳಗ್ಗೆ 11 ಗಂಟೆಯಿಂದ ಸೆ.13ರ ಮಧ್ಯಾಹ್ನ 2.30ರೊಳಗೆ ಈ ರೀತಿ ಡಿಜಿಟಲ್‌ ಕಟಕಟೆಯಲ್ಲಿ ಅರೆಸ್ಟ್‌ ಆಗಿದ್ದರು. ಹೆಚ್ಚಿನ ಈ ರೀತಿ ಸೈಬರ್‌ ಕ್ರೈಂಗಳು ವಂಚಕರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ಕೋರ್ಟ್‌ ಮುಂದೆ ಅಧಿಕಾರಿಗಳ ಸೋಗಿನಲ್ಲಿ ಕಾಣಿಸಿಕೊಂಡಿದ್ದ ವಂಚಕರು ಇಂಗ್ಲಿಷ್‌ ಭಾಷೆಯಲ್ಲೇ ತಮ್ಮ ಡೀಲ್‌ ಕುದುರಿಸಿಕೊಂಡಿರುವುದು ಗಮನಾರ್ಹ.
ಸೆ.11ರಂದು ರಾವ್‌ ಅವರ ಮೊಬೈಲ್‌ಗೆ ಅನಾಮಧೇಯ ಸಂಖ್ಯೆಯಿಂದ ಸ್ವಯಂ ಚಾಲಿತ ಕರೆಯೊಂದು ಬಂದಿದ್ದು, ಆ ಕರೆಯಲ್ಲಿ ತಮ್ಮ ಮೊಬೈಲ್‌ ಸಂಖ್ಯೆ ಬ್ಲಾಕ್‌ ಆಗಿರುವುದಾಗಿ ಸಂದೇಶ ಬಂದಿತ್ತು. ಆ ಕರೆಯು ಕೂಡಲೇ ವರ್ಗಾವಣೆಯಾಗಿದ್ದು, ಆ ವ್ಯಕ್ತಿ ತನ್ನನ್ನು ಮುಂಬೈನ ಕ್ರೈಂ ಬ್ರಾಂಚ್‌ ಪ್ರತಿನಿಧಿಯಾಗಿ ಪರಿಚಯಿಸಿಕೊಂಡಿದ್ದ.
ಬಳಿಕ ಆ ವ್ಯಕ್ತಿಯು ತಾವು ಹಣ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದಾಗಿ ರಾವ್‌ ಅವರಿಗೆ ಹೇಳುತ್ತಾನೆ. ಅಷ್ಟೇ ಅಲ್ಲ ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್‌ ನಂಬರ್‌ ಹಾಗೂ ಆಧಾರ್‌ ಕಾರ್ಡ್‌ ಸಂಖ್ಯೆಯು ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದಕ್ಕೆ ಬಳಸಿಕೊಂಡಿರುವುದಾಗಿ ಹೇಳಿದ್ದ ಎಂದು ರಾವ್‌ ಪತ್ರಿಕೆಯೊಂದಕ್ಕೆ ತಾವು ಮೋಸ ಹೋಗಿರುವ ಬಗ್ಗೆ ವಿವರಿಸಿದ್ದಾರೆ.


ತಾವು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಫೋನ್‌ ಕರೆಯನ್ನು ಕಟ್‌ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ. ಅಷ್ಟೊತ್ತಿಗೆ ಮತ್ತೊಂದು ಕಡೆಯಿಂದ ಅವರಿಗೆ ವಾಟ್ಸಾಪ್‌ ಕರೆ ಬಂದಿದ್ದು, ಆ ವ್ಯಕ್ತಿಯು ಪೋಲಿಸ್‌ ಸಮವಸ್ತ್ರ ಧರಿಸಿದ್ದ. ಅಷ್ಟೇಅಲ್ಲ, ಆ ವ್ಯಕ್ತಿಯು ಪೊಲೀಸ್‌ ಠಾಣೆಯೊಂದರಲ್ಲಿ ಕುಳಿತ ರೀತಿಯಲ್ಲೇ ಇತ್ತು. ಅದನ್ನು ನೋಡಿದ ರಾವ್‌ ಅವರಿಗೆ ತಮ್ಮ ಆಧಾರ್‌ ಕಾರ್ಡ್‌ನ್ನು ಯಾರೋ ಮಿಸ್‌ಯೂಸ್‌ ಮಾಡಿರುವ ಸಾಧ್ಯತೆಯಿದೆ ಎನ್ನುವ ಅನುಮಾನ ಮೂಡಿದೆ.
ಇದನ್ನೆಲ್ಲ ಗಮನಿಸಿದ್ದ ರಾವ್‌ ಅವರಿಗೆ ಕೂಡಲೇ ಸಮೀಪದಲ್ಲಿರುವ ಇಂದಿರಾನಗರ ಪೊಲೀಸ್‌ ಠಾಣೆಗೆ ಹಾಜರಾಗುವ ನಿರ್ಧಾರ ಮಾಡಿದ್ದರು. ಅಷ್ಟೊತ್ತಿಗೆ ಆ ಖದೀಮರು ಕುಳಿತಲ್ಲಿಂದ ಆಚೆಈಚೆ ಹೋಗುವಂತಿಲ್ಲ ಎಂಬ ಆರ್ಡರ್‌ ಮಾಡಿದ್ದರು. ಜತೆಗೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ಗೊತ್ತಿಲ್ಲ ಎಂಬ ಕಥೆಯನ್ನು ಹೆಣೆದಿದ್ದರು. ಬಳಿಕ ಅಲ್ಲಿ ಮತ್ತೊಬ್ಬ ಪ್ರತ್ಯಕ್ಷವಾಗಿದ್ದು, ಆತ ತನ್ನನ್ನು ಸಿಬಿಐ ಅಧಿಕಾರಿ ರಾಹುಲ್‌ ಗುಪ್ತಾ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ. ಅಷ್ಟೇಅಲ್ಲ, ರಾವ್‌ ಅವರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿರುವುದಾಗಿ ಹೇಳಿದ್ದಾನೆ. ನಂತರದಲ್ಲಿ ಅನಿವಾರ್ಯವಾಗಿ ರಾವ್‌ ಅವರು ಗುಪ್ತಾ ನೀಡುತ್ತಿದ್ದ ಆದೇಶಗಳನ್ನು ಪಾಲಿಸಬೇಕಾಗಿ ಬಂತು. ಅಷ್ಟಕ್ಕೆ ಸುಮ್ಮನಾಗದ ಖದೀಮರು ಸ್ಕೈಪ್‌ ಕರೆ ಮಾಡಿ ರಾವ್‌ ಅವರ ಮೇಲೆ ನಿಗಾ ಇರಿಸಲಾರಂಭಿಸಿದ್ದರು. ಮುಂದೆ ತಮ್ಮನ್ನು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಕೋರ್ಟ್‌ ಮುಂದೆ ಹಾಜರುಪಡಿಸುವುದಾಗಿ ಕಥೆ ಕಟ್ಟಿದ್ದರು. ಅದರಂತೆ ಕೋರ್ಟ್‌ ರೂಮ್‌ ಮುಂದೆ ಹಾಜರುಪಡಿಸಿದ್ದಾರೆ. ಅದು ನೋಡುವಾಗ ನೈಜ ಕೋರ್ಟ್‌ ರೂಂನಂತೆಯೇ ಇತ್ತು. ಪೀಠದಲ್ಲಿ ಜಡ್ಜ್‌ ಕೂಡ ಕುಳಿತುಕೊಂಡಿದ್ದರು. ಆ ಮೂಲಕ ರಾವ್‌ ವಿರುದ್ಧದ ಆರೋಪಗಳ ಬಗ್ಗೆ ಕೋರ್ಟ್‌ ಮುಂದೆ ಅಧಿಕಾರಿಗಳ ಸೋಗಿನಲ್ಲಿದ್ದವರು ವಿವರಿಸಿದ್ದಾರೆ. ನಂತರದಲ್ಲಿ ರಾವ್‌ ಅವರಿಗೆ ತಮ್ಮ ಖಾತೆಯಲ್ಲಿದ್ದ ಹಣವನ್ನು ಆರ್‌ಬಿಐ ಮಾರ್ಗಸೂಚಿ ಪ್ರಕಾರ ರಾವ್‌ ಅವರ ಖಾತೆಯಲ್ಲಿದ್ದ 59 ಲಕ್ಷ ರೂ. ಹಣವನ್ನು ಬೇರೆ-ಬೇರೆ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಆ ದಿನ ಇಡೀ ರಾತ್ರಿ ಆ ಸೈಬರ್‌ ವಂಚಕರು ರಾವ್‌ ಅವರನ್ನು ನಿದ್ದೆ ಮಾಡುವುದಕ್ಕೆ ಬಿಟ್ಟಿರಲಿಲ್ಲ.
ದುರಾದೃಷ್ಟಾವಶಾತ್‌ ರಾವ್‌ ಅವರಿಗೆ ಹೆಚ್ಚಿನ ಸ್ನೇಹಿತರು ಇಲ್ಲದ ಕಾರಣ ತಮಗೆ ಆಗಿರುವ ಅನ್ಯಾಯವನ್ನು ಹೇಳಿಕೊಳ್ಳುವುದಕ್ಕೆ ಯಾರು ಇರಲಿಲ್ಲದ ಕಾರಣ ಆ ರಾತ್ರಿಯಲ್ಲೇ ಅದೇ ಆತಂಕದಲ್ಲಿ ಕಳೆದಿದ್ದರು. ಜತೆಗೆ ತಮ್ಮ ಕುಟುಂಬಸ್ಥರು ಮುಂಬೈನಲ್ಲಿ ನೆಲೆಸಿದ್ದರು. ಹೀಗಾಗಿ, ಅನಿವಾರ್ಯವಾಗಿ ರಾವ್‌ ಅವರು ಮರುದಿನ 50 ಲಕ್ಷ ರೂ. ಹಾಗೂ 9 ಲಕ್ಷ ರೂ.ವನ್ನು ಎರಡು ಖಾತೆಗಳಿಗೆ ವರ್ಗಾಯಿಸಿದ್ದರು. ಆ ನಂತರವಷ್ಟೇ ರಾವ್‌ ಅವರಿಗೆ ಮೋಸ ಹೋಗಿರುವುದು ಅರಿವಾಗಿದ್ದು, ಕೂಡಲೇ ಇಂದಿರಾನಗರ ಠಾಣೆಗೆ ದೌಡಾಯಿಸಿದ್ದಾರೆ. ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಖಾತೆಯಲ್ಲಿದ್ದ ಅಷ್ಟೂ ಹಣ ಖಾಲಿಯಾಗಿ ರಾವ್‌ ಅವರು ಬರಸಿಡಿಲು ಬಡಿದವರಂತೆ ಕುಸಿದು ಹೋಗಿದ್ದಾರೆ. ರಾವ್‌ ಅವರ ಈ ಮೋಸದ ಕಥೆಯನ್ನು ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ. ಆ ಮೂಲಕ, ಇಂಥಹ ಮತ್ತೊಂದು ಡಿಜಿಟಲ್‌ ಸೈಬರ್‌ ಕ್ರೈಂ ಅಪರಾಧದ ಮೋಸದ ಜಾಲಕ್ಕೆ ಅಮಾಯಕರು ಸಿಲುಕಬಾರದ್ದು ಎನ್ನುವುದು ಪೊಲೀಸರು ಹಾಗೂ ರಾವ್‌ ಅವರ ಮನವಿ ಕೂಡ ಹೌದು.

Related Articles

Leave a Reply

Your email address will not be published. Required fields are marked *

Back to top button
error: Content is protected !!