ರಾಜ್ಯ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಬಳ್ಳಾರಿ ಮಾಡ್ಯೂಲ್ ಕುಖ್ಯಾತಿಯ ಮಿನಾಜ್ ಅಲಿಯಾಸ್
ಸುಲೇಮಾನ್ ಏನ್ ಐ ಎ ವಶಕ್ಕೆ.!

ಬೆಂಗಳೂರು: ವಾರದ ಹಿಂದೆ ರಾಜ್ಯವನ್ನೇ ಬೆಚ್ಚಿಬೀಳಿಸಿದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಬಳ್ಳಾರಿ ಮಾಡ್ಯೂಲ್ ಕುಖ್ಯಾತಿಯ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತನನ್ನು ವಶಕ್ಕೆ ಪಡೆದಿರುವ NIA ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಬಾಂಬ್ ಇಟ್ಟ ಬಾಂಬರ್ ಅದು ಸ್ಪೋಟಗೊಂಡ ಬಳಿಕ ಬಸ್ಸಿನ ಮೂಲಕ ರಾಜ್ಯದ ವಿವಿದೆಡೆ ಪ್ರಯಾಣಿಸಿರುವುದು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಯಾಗಿದೆ. ಬಾಂಬರ್ ಬೆಂಗಳೂರಿನಿಂದ ಬೀದ‌ರ್ ಬಸ್ಸಿನಲ್ಲಿ ತೆರಳಿ ಭಟ್ಕಳದ ಕಡೆಗೆ ಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು ಎನ್‌ಐಎ ಮತ್ತು ಸಿಸಿಬಿ ಪೊಲೀಸರು ಉಗ್ರನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬಾಂಬ್ ಸ್ಫೋಟದಲ್ಲಿ ಮಿನಾಜ್ ಅಲಿಯಾಸ್ ಸುಲೇಮಾನ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವೊಂದರ ಆರೋಪಿಯಾಗಿರುವ ಸುಲೇಮಾನ್ ಸದ್ಯ ಜೈಲಿನಲ್ಲಿದ್ದಾನೆ. ಡಿ.18 ರಂದು ಎನ್‌ಐಎ ದಾಳಿ ನಡೆಸಿ ಬಳ್ಳಾರಿಯಲ್ಲಿ ಮಿನಾಜ್ ಅಲಿಯಾಸ್ ಸುಲೇಮಾನ್ ಬಂಧಿಸಿತ್ತು. ಈತನನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಎನ್‌ಐಎ ಬಾಡಿ ವಾರಂಟ್ ಮೇಲೆ ಅನುಮತಿ ಪಡೆದುಕೊಂಡಿದೆ. ನ್ಯಾಯಾಲಯವು ಮಾರ್ಚ್ 9ರವರೆಗೆ ಕಸ್ಟಡಿಗೆ ನೀಡಿದೆ.

ಏನಿದು ಬಳ್ಳಾರಿ ಮಾಡ್ಯೂಲ್ ಎಂದರೆ?

ಐಸಿಸ್‌ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಸಹಚರರು ಬಳ್ಳಾರಿ ಐಸಿಸ್ ಮಾಡ್ಯೂಲ್ ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ಗುಂಪು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು.
ಕಳೆದ 5 ವರ್ಷದಿಂದ ಪಿಎಫ್‌ಐ ಸಂಘಟನೆಯಲ್ಲಿ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈತನಿಗೆ ಬಳ್ಳಾರಿಯ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉತ್ತರ ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಇವರು ಪ್ಲಾನ್ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಧರ್ಮಕ್ಕಾಗಿ ಜೀವವನ್ನೇ ಬಲಿ ಕೊಡಲು ಸಿದ್ಧರಿದ್ದರೋ ಅವರನ್ನೇ ಬಳಸಿಕೊಳ್ಳುತ್ತಿದ್ದರು. ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ಬಳಿಕ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಕಳೆದ ಡಿಸೆಂಬರ್‌ನಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಈ ಗ್ಯಾಂಗ್‌ ಸದಸ್ಯರ ಮೇಲೆ ಎನ್‌ಐಎ ದಾಳಿ ನಡೆಸಿತ್ತು. ದಾಳಿ ವೇಳೆ ಐಇಡಿ ಸ್ಫೋಟಿಸಲು ಬೇಕಾಗಿದ್ದ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಸಲ್ಪ‌ರ್, ಪೊಟಾಷಿಯಂ ನೈಟ್ರೇಟ್, ಗನ್ ಪೌಡರ್, ಸಕ್ಕರೆ, ಎಥೆನಾಲ್, ಹರಿತವಾದ ಆಯುಧಗಳು, ಹಣ, ರಹಸ್ಯ ಮಾಹಿತಿಯ ದಾಖಲೆಗಳು, ಸ್ಮಾರ್ಟ್‌ಫೋನ್, ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!