ಕ್ರೀಡೆ

ಮೇ 28 : ಇಂದು ಐಪಿಎಲ್ 2023ರ ಫೈನಲ್ ಕದನ

Click below to Share News

ಅಹಮದಾಬಾದ್: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳ ನಡುವಣ ಈ ಮಹತ್ವದ ಕಾದಾಟಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ.

ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್ ಟೂರ್ನಿಯ ಆರಂಭಿಕ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ 4.8 ಕೋಟಿ ರೂ. ಪಡೆದಿತ್ತು ಹಾಗೂ ರನ್ನರ್‌ ಅಪ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2.4 ಕೋಟಿ ರೂ. ನೀಡಲಾಗಿತ್ತು.

ಇಲ್ಲಿಯವರೆಗೂ ಐಪಿಎಲ್‌ ಟೂರ್ನಿಯು 15 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದ್ದು, 16ನೇ ಆವತ್ತಿ ಇದೀಗ ನಡೆಯುತ್ತಿದೆ. ಸದ್ಯ ಐಪಿಎಲ್ ವಿಶ್ವದಾದ್ಯಂತ ಹೆಚ್ಚಿನ ಪ್ರಚಾರ ಪಡೆದುಕೊಂಡಿದ್ದು, ವೀಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2022ರ ಐಪಿಎಲ್ ಟೂರ್ನಿಯ ಚಾಂಪಿಯನ್‌ ಗುಜರಾತ್ ಟೈಟನ್ಸ್‌ಗೆ 20 ಕೋಟಿ ರೂ. ಹಾಗೂ ರನ್ನರ್ ಅಪ್ ರಾಜಸ್ಥಾನ್ ರಾಯಲ್ಸ್‌ಗೆ 13 ಕೋಟಿ ರೂ. ಲಭಿಸಿತ್ತು. ಎರಡನೇ ಕ್ವಾಲಿಫೈಯರ್‌ ಆರ್‌ಸಿಬಿಗೆ 7 ಕೋಟಿ ರೂ. ಹಾಗೂ ಪ್ಲೇ-ಆಫ್‌ ಗೇರಿದ್ದ ಲಖನೌ ಸೂಪರ್ ಜಯಂಟ್ಸ್‌ಗೆ 6.5 ಕೋಟಿ ರೂ. ನಗದು ಬಹುಮಾನ ನೀಡಲಾಗಿತ್ತು.

2023ರ ಸಾಲಿನ ಐಪಿಎಲ್ ಟೂರ್ನಿಯ ಬಹುಮಾನದ ಮೊತ್ತ
2023ರ ಸಾಲಿನ ಐಪಿಎಲ್ ಟೂರ್ನಿಯಲ್ಲೂ ಒಟ್ಟು 46.5 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ವರದಿ ಮಾಡಿದ್ದು, ಕಳೆದ ಆವೃತ್ತಿಯ ಲೆಕ್ಕಾಚಾರದಂತೆ ಈ ಬಾರಿಯೂ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂ. ಹಾಗೂ ರನ್ನರ್‌ ಅಪ್ ತಂಡಕ್ಕೆ 13 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತದೆ.

ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತ ಮುಂಬೈ ಇಂಡಿಯನ್ಸ್‌ಗೆ 7 ಕೋಟಿ ರೂ., ಎಲಿಮಿನೇಟರ್ ಹಂತದಲ್ಲೇ ಪಯಣ ಮುಗಿಸಿದ ಲಖನೌ ಸೂಪರ್ ಜಯಂಟ್ಸ್‌ಗೆ 6.5 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತದೆ.
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಬ್ಯಾಟ್ಸ್‌ಮನ್‌ಗೆ 15 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ವಿಜೇತ ಬೌಲರ್‌ಗೂ 15 ಲಕ್ಷ ರೂ. ನೀಡಲಾಗುತ್ತದೆ. ಎರಡನೇ ಕ್ವಾಲಿಫೈಯರ್‌ ಪಂದ್ಯದ ಮುಕ್ತಾಯಕ್ಕೆ ಶುಭಮನ್ ಗಿಲ್‌ (851 ರನ್‌) ಆರೆಂಜ್ ಗೆಲ್ಲುವುದು ಬಹುತೇಕ ಖಚಿತ, ಪರ್ಪಲ್‌ ರೇಸ್‌ನಲ್ಲಿ ಮೊಹಮ್ಮದ್ ಶಮಿ (28 ವಿಕೆಟ್), ರಶೀದ್ ಖಾನ್ (27 ವಿಕೆಟ್) ಹಾಗೂ ಮೋಹಿತ್ ಶರ್ಮಾ ( 24 ವಿಕೆಟ್) ಇದ್ದಾರೆ.

ಉದಯೋನ್ಮುಖ ಆಟಗಾರರಿಗೂ 20 ಲಕ್ಷ ನಗದು ಬಹುಮಾನ ಸಿಗಲಿದೆ. ಕೆಕೆಆರ್‌ನ ರಿಂಕು ಸಿಂಗ್ (474 ರನ್), ಪಂಜಾಬ್ ಕಿಂಗ್ಸ್‌ನ ಪ್ರಭ್‌ಸಿಮ್ರನ್( 358 ರನ್), ಚೆನ್ನೈ ಸೂಪರ್ ಕಿಂಗ್ಸ್‌ನ ವೇಗಿ ಮತೀಶ ಪತಿರಣ (15 ವಿಕೆಟ್) ಈ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.
ಇನ್ನು ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರರಿಗೂ ಕೂಡ 12 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಗುಜರಾತ್ ಟೈಟನ್ಸ್‌ನ ಶುಭಮನ್ ಗಿಲ್ (851 ರನ್ ಫೈನಲ್ ಪಂದ್ಯಕ್ಕೂ ಮುನ್ನ), ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (730 ರನ್), ರಶೀದ್ ಖಾನ್(27 ವಿಕೆಟ್, ಫೈನಲ್ ಪಂದ್ಯಕ್ಕೂ ಮುನ್ನ) ಈ ಪ್ರಶಸ್ತಿಯ ರೇಸ್ ನಲ್ಲಿದ್ದಾರೆ.

ವರ್ಷದ ಗೇಮ್ ಚೇಂಜರ್ ಆಟಗಾರರಿಗೆ 12 ಲಕ್ಷ ರೂ. ಸಿಗಲಿದೆ. ಶುಭಮನ್ ಗಿಲ್, ರಶೀದ್ ಖಾನ್, ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ. ಇನ್ನುಳಿದಂತೆ ಈ ಆವೃತ್ತಿಯ ಪವರ್‌ಪ್ಲೇ, ಸೂಪರ್ ಸ್ಟ್ರೈಕರ್‌ ವಿಜೇತರಿಗೂ ತಲಾ 15 ಲಕ್ಷ ರೂ. ನಗದು ನೀಡಿದರೆ, ಅತಿ ಸಿಕ್ಸರ್ ಸಿಡಿಸಿದ ಆಟಗಾರನಿಗೆ 12 ಲಕ್ಷ ರೂ. ದೊರೆಯಲಿದೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!