ರಾಜ್ಯ

ಬೆಂಗಳೂರು ಮೊದಲ ಬಾರಿಯ ಕಂಬಳಕ್ಕೆ 78 ಜೋಡಿ ಕೋಣಗಳು ನೋಂದಣಿ..!

Click below to Share News

ಪುತ್ತೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25,26 ರಂದು ಮೊದಲ ಬಾರಿಗೆ ನಡೆಯುವ ಕಂಬಳ ಹೊಸ ಚರಿತ್ರೆ ಬರೆಯಲಿದೆ. ಬರೋಬ್ಬರಿ 78 ಕೋಣಗಳು ನೋಂದಣಿಯಾಗಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿವೆ.

ಮಾಧ್ಯಮಗಳ ಜತೆ ಮಾತನಾಡಿದ ಬೆಂಗಳೂರು ಕಂಬಳ ಆಯೋಜನಾ ಸಮಿತಿಯ ಅಧ್ಯಕ್ಷರಾದ ಪುತ್ತೂರು ಶಾಸಕ ಅಶೋಕ್ ರೈ, ಬೆಂಗಳೂರು ಕಂಬಳ- ನಮ್ಮ ಕಂಬಳ ಎಂಬ ಪರಿಕಲ್ಪನೆಯಲ್ಲಿ ನಡೆಯಲಿರುವ ಕ್ರೀಡೆಗೆ ಈಗಾಗಲೇ 78 ಜತೆ ಕೋಣಗಳ ನೋಂದಣಿ ಆಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪ್ರಥಮ ಬಾರಿ ಕಂಬಳ ನಡೆಯುತ್ತಿರುವ ಕಾರಣ ಬಹಳ ಅಚ್ಚುಕಟ್ಟಾದ ವ್ಯವಸ್ಥೆಗೆ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮಿತಿ ರಚಿಸಲಾಗಿದ್ದು, ವೆಬ್‌ಸೈಟ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅಕ್ಟೋಬರ್ 11 ರಂದು ಬುಧವಾರ ಬೆಳಗ್ಗೆ 10.30ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳಕ್ಕೆ ಕರೆ ಮುಹೂರ್ತ ನಡೆಯಲಿದೆ. ಕೋಡಿಂಬಾಡಿ ಮಹಿಷಮರ್ದಿನಿ ದೇವಳದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಸೀಮೆ ದೇವರಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ತುಳುನಾಡಿನ ಈ ಜಾನಪದ ಕ್ರೀಡೆ ಉತ್ತಮವಾಗಿ ನಡೆದು, ಇಡೀ ದೇಶಕ್ಕೆ ತುಳುನಾಡಿನ ಶ್ರಿಮಂತ ಪರಂಪರೆ ಪರಿಚಯವಾಗಬೇಕು ಎಂಬ ಉದ್ದೇಶವಿದೆ ಎಂದರು.

ರಾಜಕೀಯ ರಹಿತ ಉತ್ಸವ.
ಕಂಬಳ ಎಲ್ಲರ ಪಾಲಿನ ಅಚ್ಚುಮೆಚ್ಚಿನ ಕ್ರೀಡೆಯಾಗಿದ್ದು, ಪಕ್ಷಭೇದವಿಲ್ಲದೆ ನಡೆಯಲಿದೆ. ರಾಜ್ಯ ಸರಕಾದಿಂದ ನೆರವು ಸಿಗಲಿದೆ. ಕೋಣಗಳ ಮಾಲೀಕರು ದೂರದ ಬೆಂಗಳೂರಿಗೆ ಕೋಣಗಳನ್ನು ತರುವ ವಿಚಾರದಲ್ಲಿ ನಮಗೆ ಆರಂಭದಲ್ಲಿ ಆತಂಕವಿತ್ತು. ಇದಕ್ಕಾಗಿ ಕಂಬಳದ ಯಜಮಾನರ ಸಭೆ ನಡೆಸಲಾಗಿತ್ತು. ಪ್ರಸ್ತುತ ಯಜಮಾನರ ಉತ್ಸಾಹ ಖುಷಿ ನೀಡಿದೆ. ಈಗಾಗಲೇ ಜತೆ ಕೋಣಗಳ ನೋಂದಣಿ ಮುಗಿದೆ ಎಂದರು.ರೈಲು, ಬಸ್ ಟಿಕೆಟ್ ಬುಕ್ಕಿಂಗ್ನ.24ರಂದು ಮಂಗಳೂರಿನಿಂದ ಹೊರಡುವ ಬೆಂಗಳೂರು ರೈಲಿನ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ. ಇನ್ನೂ ಒಂದೆರಡು ರೈಲುಗಳನ್ನು ಆ ದಿನ ಓಡಿಸುವಂತೆ ಕಂಬಳ ಸಮಿತಿಯಿಂದ ರೈಲ್ವೆಗೆ ಮನವಿ ಮಾಡಲಾಗಿದೆ. ಆ ದಿನ ಹೊರಡುವ ಕೆಎಸ್ಎಸ್‌ಆರ್‌ಸಿ ಬಸ್‌ಗಳ ಟಿಕೆಟ್‌ಗಳೂ ಬುಕ್ ಆಗಿವೆ.ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ ಸುಮಾರು 15 ಸಾವಿರ ಮಂದಿ ಕಂಬಳಕ್ಕೆ ಬರುವ ನಿರೀಕ್ಷೆ ಇದೆ. ಇದಲ್ಲದೆ ಬೆಂಗಳೂರಿನ ಜನ, ಅಲ್ಲಿರುವ ಕರಾವಳಿಗರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಸಚಿವರು ಕೂಡ ಫೋನ್ ಮಾಡಿ ಕಂಬಳದ ಬಗ್ಗೆ ಕಾತರತೆ ತೋರಿದ್ದಾರೆ ಎಂದು ವಿವರಿಸಿದರು.

8 ಕೋಟಿ ರೂ. ವೆಚ್ಚ ನಿರೀಕ್ಷೆ

ಬೆಂಗಳೂರು ಕಂಬಳದ ಬಜೆಟ್ ಬಗ್ಗೆ ಅಂತಿಮ ಲೆಕ್ಕಾಚಾರ ಸಿಕ್ಕಿಲ್ಲ. ಆದರೂ 7ರಿಂದ 8 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕೋಣಗಳನ್ನು ಬೆಂಗಳೂರಿನಿಂದ ಕರೆದುಕೊಂಡು ಹೋಗಿ ಬರುವ ಕೆಲಸ ಸುರಕ್ಷಿತವಾಗಿ ಆಗಬೇಕಿದೆ. ಅರಮನೆ ಮೈದಾನದಲ್ಲಿ ಅದ್ದೂರಿ ಕಂಬಳಕ್ಕೆ ಎಲ್ಲ ರೀತಿಯ ಮೂಲಸೌಕರ್ಯ ಮಾಡಬೇಕಿದೆ. ಸಾಂಸ್ಕೃಕಿಕ ಕಾರ್ಯಕ್ರಮಗಳ ವ್ಯವಸ್ಥೆಯಾಗಬೇಕಿದೆ. ಫುಡ್ ಫೆಸ್ಟ್ವಲ್ ನಡೆಯಲಿದ್ದು, ಸುಮಾರು 125 ಸ್ಟಾಲ್‌ಗಳ ವ್ಯವಸ್ಥೆಯಾಗಬೇಕಿದೆ. ತುಳುನಾಡಿನ ಶ್ರೀಮಂತ ಸಂಸ್ಕೃತಿ ದೇಶಕ್ಕೆ ಪರಿಚಯಿಸಯವ ಕೆಲಸ ರಾಜ್ಯ ರಾಜಧಾನಿಯಲ್ಲಿ ನಡೆಯಬೇಕಾದ ಕಾರಣ ಸಾಕಷ್ಟು ಖರ್ಚು ತಗುಲಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!