ನಟ ಯಶ್ ಬ್ಯಾನರ್ ಕಟ್ಟಲು ಹೋಗಿ ಮೂವರು ಅಭಿಮಾನಿಗಳು ಸಾವು.
ಗದಗಜಿಲ್ಲೆಯಲ್ಲಿ ನಟ ಯಶ್ ಅವರ ಮೂವರು ಅಭಿಮಾನಿಗಳು ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ವಿಶೇಷವಾಗಿ ಬ್ಯಾನರ್ ಕಟ್ಟುವ ವೇಳೆ ಮೂವರಿಗೆ ವಿದ್ಯುತ್ ಶಾಕ್ ತಗುಲಿದೆ.
ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಎಂಬ ಮೂವರಯ ಯುವಕರು ಸ್ಥಳದಲ್ಲೇ ಕೊನೆಯುರಿರೆಳೆದಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಭಿಮಾನಿಗಳು ಮಧ್ಯರಾತ್ರಿ ಬರ್ತ್ ಡೇ ಆಚರಣೆಗೆ ಮುಂದಾಗಿದ್ದರು. ಯಶ್ ಅವರ ದೊಡ್ಡ ಫೋಟೊ ಇರುವ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಹಾವಳಿಗೂ ಮುನ್ನ ಬಹಳ ಅದ್ದೂರಿಯಾಗಿ ಒಮ್ಮೆ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದರು. ಈ ವರ್ಷ ಸಿನಿಮಾಗಳ ಕೆಲಸಗಳ ಕಾರಣ ವಿದೇಶದಕ್ಕೆ ತರಳಿದ್ದಾರೆ. ಇತ್ತೀಚೆಗೆ ಪತ್ರ ಬರೆದು ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. “ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ..ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು.. ಸದಾಕಾಲ ನನ್ನ ಜೊತೆ ಇರುವ. ನಿಮ್ಮ ಪ್ರೀತಿ, ಅಭಿಮಾನವೇ. ನನಗೆ ಹುಟ್ಟುಹಬ್ಬದ ಉಡುಗೊರೆ.ನಿಮ್ಮ ಪ್ರೀತಿಯ ಯಶ್” ಎಂದು 4 ದಿನಗಳ ಹಿಂದೆ ಯಶ್ ಪೋಸ್ಟ್ ಮಾಡಿದ್ದರು.