ರಾಜ್ಯ

ನೀನು ದೇವರ ಮಗು, ಗೆಲ್ಲುತ್ತೀಯ : ಬಿಜೆಪಿ ಅಭ್ಯರ್ಥಿಗೆ ಜನಾರ್ಧನ ಪೂಜಾರಿ ಆಶೀರ್ವಾದ !

Click below to Share News

ಮಂಗಳೂರು : ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗುತ್ತಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಜನಾರ್ಧನ ಪೂಜಾರಿಯವರು ಬಿಜೆಪಿ ಅಭ್ಯರ್ಥಿಗೆ ಗೆದ್ದು ಬರುತ್ತೀಯಾ ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ.

ತುಳು ಭಾಷೆಯಲ್ಲಿ ಪೂಜಾರಿಯವರು ಶುಭ ಕೋರುತ್ತಿರುವ ಈ ವಿಡಿಯೋ, ಚುನಾವಣೆಗೆ ಒಂದು ದಿನ ಇರುವ ಈ ಸಮಯದಲ್ಲಿ ದಕ್ಷಿಣ ಕನ್ನಡದಲ್ಲಿ ಹಾಟ್ ಕೇಕ್ ನಂತೆ ಮೊಬೈಲ್ ನಿಂದ ಮೊಬೈಲಿಗೆ ಹರಿದಾಡುತ್ತಿದೆ.

ಆ ವೇಳೆ, ಪೂಜಾರಿಯವರು ಚೌಟ ಅವರನ್ನು ಆಶೀರ್ವದಿಸುತ್ತಾ, ” ಭಯ ಪಡಬೇಡಿ, ಗೆಲ್ಲುವುದು ನಾವೇ.. ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ. ಪಾರ್ಟಿಗೀರ್ಟಿ ಏನೂ ಇಲ್ಲ.. ಜಾತಿಯೂ ಇಲ್ಲ.. ನೀವು ದೇವರ ಮಗು ” ಎಂದು ಆಶೀರ್ವದಿಸುತ್ತಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಹಿರಿಯ ನ್ಯಾಯವಾದಿ, ಬಿಲ್ಲವ ಸಮುದಾಯದ ಪದ್ಮರಾಜ್ ಆರ್ ಪೂಜಾರಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಜನಾರ್ಧನ ಪೂಜಾರಿ ಆಶೀರ್ವದಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಪೂಜಾರಿಯವರು ಕಾಂಗ್ರೆಸ್ಸಿಗೆ ಮತ ನೀಡಿ ಎನ್ನುವ ಫೇಸ್‌ಬುಕ್‌ ಪೋಸ್ಟ್ ಕೂಡಾ ಸುದ್ದಿ ಮಾಡುತ್ತಿದೆ. ಜಾತಿಗೀತಿ ಏನೂ ಇಲ್ಲ ಎಂದು ಪೂಜಾರಿಯವರು ಬಿಜೆಪಿ ಅಭ್ಯರ್ಥಿಯನ್ನು ಆಶೀರ್ವದಿಸುತ್ತಾ ಹೇಳಿದ್ದರೂ, ಕಾಂಗ್ರೆಸ್ಸಿಗೆ ಬೆಂಬಲಿಸಿ ಎನ್ನುವ ಪೋಸ್ಟ್ ನಲ್ಲಿ ’ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬಿಲ್ಲವ ಸಮುದಾಯ ಶೋಷಣೆಗೆ ಒಳಗಾಗಿದೆ, ಬಿಜೆಪಿಯವರಿಗೆ ನಮ್ಮ ಸಮುದಾಯದ ಅಮಾಯಕ ಹುಡುಗರೇ ಬೇಕಾಗಿದ್ದಾರೆ ” ಎಂದು ಪೂಜಾರಿಯವರು ಹೇಳಿದ್ದಾರೆ.

” ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಕಳೆದ ಮೂರು ದಶಕಗಳಿಂದ ಒಂದಲ್ಲಾ ಒಂದು ವಿಷಯದಲ್ಲಿ ಭಾವನಾತ್ಮಕವಾಗಿ ಬಂಧಿಸಿ ಅದರ ಲಾಭವನ್ನು ಪಡೆದು, ಕ್ಷೇತ್ರದಲ್ಲಿ ಯಾವ ಅಭಿವೃದ್ದಿಯನ್ನೂ ಬಿಜೆಪಿ ಮಾಡಲಿಲ್ಲ, ಯಾವ ಸಮುದಾಯವನ್ನೂ ಮೇಲಕ್ಕೆ ಬರಲು ಬಿಡಲಿಲ್ಲ “.

ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಗರಡಿಯಲ್ಲಿ ಬೆಳೆದ ಪದ್ಮರಾಜ್ ಪೂಜಾರಿ ಎನ್ನುವ ಅಪ್ಪಟ ನಿಸ್ವಾರ್ಥ ಕಾಂಗ್ರೆಸ್ ಜನಸೇವಕನಿಗೆ ಈ ಬಾರಿ ನಿಮ್ಮ ಸೇವೆ ಮಾಡುವ ಅವಕಾಶವನ್ನು ನೀಡಬೇಕೆಂದು ಎಂದು ಜನಾರ್ಧನ ಪೂಜಾರಿಯವರು ಫೇಸ್‌ಬುಕ್‌ ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!