ಸೌಜನ್ಯ ಕೊಲೆ ಪ್ರಕರಣ : ಸಿಬಿಐ ವಿಶೇಷ ಕೋರ್ಟ್‌ನಿಂದ ಜೂ. 16 ಕ್ಕೆ ತೀರ್ಪು ಪ್ರಕಟ
ಬೆಳ್ತಂಗಡಿ : ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ (17ವ) ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದ ಪ್ರಕರಣ ನಡೆದು 11 ವರ್ಷಗಳ ಬಳಿಕ ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ನಿಂದ ಜೂನ್ 16 ರಂದು ತೀರ್ಪು ಪ್ರಕಟವಾಗಲಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗಳ ಎರಡನೇ ಪುತ್ರಿ ಸೌಜನ್ಯ (17ವ) ಕಾಲೇಜು ಮುಗಿಸಿ ಮನೆಗೆ ಹಿಂತಿರುಗುವಾಗ 9-10-2012 ರಂದು ಸಂಜೆ 4.15ಕ್ಕೆ ನಾಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
10-10-2012 ರಂದು ರಾತ್ರಿ 10.30ಕ್ಕೆ ಧರ್ಮಸ್ಥಳ ಮಣ್ಣಸಂಖ ಎಂಬಲ್ಲಿ ಶವ ಪತ್ತೆಯಾಗಿತ್ತು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೇಪ್ & ಮರ್ಡರ್ ಪ್ರಕರಣ ದಾಖಲಾಗಿತ್ತು. 10-10-2012 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿಯ ಸಂತೋಷ್ ರಾವ್ (38ವ) ಧರ್ಮಸ್ಥಳದ ಬಾಹುಬಲಿ ಬೆಟ್ಟದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಪೊಲೀಸರಿಂದ ಬಂಧಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿತ್ತು. ನಂತರ ನಡೆದ ಹಲವಾರು ಪ್ರತಿಭಟನೆಗಳಿಗೆ ಮಣಿದು ಸಿಬಿಐಗೆ ಹಸ್ತಾಂತರ ಮಾಡಲಾಗಿತ್ತು. ಆರೋಪಿ ಸಂತೋಷ್ ರಾವ್ ಬೆಂಗಳೂರು ಸಿಬಿಐ ಕೋರ್ಟ್‌ಗೆ ಕಳೆದ ಆರು ಭಾರಿಗೂ ಹೆಚ್ಚು ಹಾಜರಾಗದೆ ತಲೆಮರೆಸಿಕೊಂಡಿದ್ದು. ಪ್ರಕರಣ ನಡೆದು 11 ವರ್ಷಗಳ ಬಳಿಕ ಜೂನ್ 16 ರಂದು ಪ್ರಕರಣ ತೀರ್ಪು ಪ್ರಕಟವಾಗಲಿದೆ. ಬೆಳ್ತಂಗಡಿ ತಾಲೂಕಿನ ಜನತೆ ಪ್ರಕರಣದ ತೀರ್ಪಿಗಾಗಿ ಕಾಯುತ್ತಿದ್ದಾರೆ.