ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಕಾರಣಿಕದ ದೈವ- ದೇವರ ಮೊರೆ ಹೋದ ಕುಟುಂಬ
ಧರ್ಮಸ್ಥಳದ ಸಮೀಪ ನೇತ್ರಾವತಿಯ ಪಕ್ಕದ ಕಾಡಿನಲ್ಲಿ ಭೀಕರ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಮತ್ತೆ ಸಣ್ಣಗೆ ಆದ್ರೆ ಗಟ್ಟಿ ದನಿಯಲ್ಲಿ ಮರುಜೀವ ಬರುತ್ತಿದೆ. ಅದೂ ಮೊನ್ನೆ ಸಿಬಿಐ ವಿಶೇಷ ಕೋರ್ಟ್ ನಲ್ಲಿ, ಇದ್ದೊಬ್ಬ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಉದ್ಭವ ಆಗಿದೆ. ಸೌಜನ್ಯ ಪೋಷಕರು ಮತ್ತು ಹೋರಾಟಗಾರರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವನ್ನು ಮತ್ತು ಬೇಸರವನ್ನು ಮತ್ತು ನಮ್ಮ ನ್ಯಾಯ ವ್ಯವಸ್ಥೆಯ ಮೇಲಿನ ಒಟ್ಟಾರೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆಗಲೇ ಆಣೆ – ಪ್ರಮಾಣ – ಹರಕೆಯ ಮಾತು ಶುರುವಾಗಿತ್ತು. ಈಗ ಸೌಜನ್ಯಾಳ ಕುಟುಂಬವು ಕರಾವಳಿ ಕರ್ನಾಟಕ ನಂಬಿಕೊಂಡು ಬಂದಂತಹ ಬಹಳ ದೊಡ್ಡ ದೈವ ಒಂದಕ್ಕೆ, ಕಾರಣಿಕ ಕ್ಷೇತ್ರಕ್ಕೆ ಹರಕೆ ಇಟ್ಟಿದೆ.
ಸೌಜನ್ಯಳ ಮಾವ ಇದೀಗ ದೈವ ದೇವರಿಗೆ ಹರಕೆ ಹೊತ್ತಿರುವುದು ಸುದ್ದಿಯಾಗಿದೆ. ಸೌಜನ್ಯ ಕೊಲೆಗೆ ಕಾರಣವಾದ ಅಪರಾಧಿಗಳಿಗೆ ಇನ್ನು ಆರು ತಿಂಗಳ ಒಳಗಾಗಿ ಸರಿಯಾದ ಶಿಕ್ಷೆಯಾಗಬೇಕು, ಹಾಗಾದರೆ ನಾನು ಹರಕೆ ತೀರಿಸುತ್ತೇನೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. ನಾವು ಆಪ್ತರಕ್ಷಕರು ಎಂದುಕೊಂಡು ಇರುವ ಪೊಲೀಸರು, ವೈದ್ಯರು ನಾರಾಯಣ ಹರಿ ಎಂದು ದೇವರಲ್ಲಿ ವೈದ್ಯರಲ್ಲಿ ಕಾಣುವ ವೈದ್ಯರುಗಳು, ಜನಪದ ಕೆಲಸ ಮಾಡಬೇಕಾದ ಅಧಿಕಾರಿಗಳು, ಸರಿಯಾಗಿ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು, ಜನರ ಕಷ್ಟ ಇರುವವರ ಪರ ಯಾವತ್ತೂ ನಿಲ್ಲಬೇಕಾದ ರಾಜಕಾರಣಿಗಳು, ಒಟ್ಟಾರೆ ಭವ್ಯ ಭಾರತದ ಬಡಕಲು ವ್ಯವಸ್ಥೆ ಕೈ ಚೆಲ್ಲಿ ಕೂತ ಸಂದರ್ಭದಲ್ಲಿ ಸೌಜನ್ಯ ಗೌಡ ಕುಟುಂಬ ದೈವ ದೇವರ ಮೊರೆ ಹೋಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯಾ ಗೌಡ ಮಾವ ವಿಠಲ ಗೌಡ ಪೋಸ್ಟ್ ಒಂದನ್ನು ಹಾಕಿದ್ದಾರೆ. ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮೋತ್ಸವವನ್ನು ನೀಡುತ್ತೇವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಬೆಳ್ಳಿ ರಥ, ಅಣ್ಣಪ್ಪನಿಗೆ ಬಂಗಾರದ ಕಡಸಾಲೆ ಹರಕೆಯಾಗಿ ಒಪ್ಪಿಸುವುದಾಗಿ ತಿಳಿಸಿದ್ದಾರೆ.
ಸದ್ಯ ಆಕೆಯ ಕುಟುಂಬ, ಹೆತ್ತವರು ಮಾಡಿಕೊಂಡಿರುವ ಹರಕೆಗೆ ದೈವ-ದೇವರುಗಳು ಒಲಿದು ನೈಜ ಆರೋಪಿಗಳ ಪತ್ತೆಯಾಗಲಿ, ಆ ಮೂಲಕ ಧರ್ಮಸ್ಥಳದಲ್ಲಿ ನಡೆದ ಅಮಾಯಕ ಹೆಣ್ಣು ಮಗಳ ಸಾವಿಗೆ ಹಲವು ವರ್ಷಗಳ ಬಳಿಕವಾದರೂ ನ್ಯಾಯಾ ದೊರಕಲಿ, ತಿಮರೋಡಿ ಹೋರಾಟಕ್ಕೆ ಫಲ ದೊರಕಲಿ ಎನ್ನುವುದು ಸ್ವಸ್ಥ ಸಮಾಜದ ಹಾರೈಕೆಯಾಗಿದೆ.