ಸಮಗ್ರ ಸುದ್ದಿ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಸರಿದೂಗಿಸಲು ವಾರಾಂತ್ಯವೂ ಕ್ಲಾಸ್‌ಗೆ ಚಿಂತನೆ !

Click below to Share News

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಶಾಲಾ, ಪಿಯು ಕಾಲೇಜುಗಳಿಗೆ ನೀಡಿದ ಏಳು ದಿನಗಳ ರಜೆಗಳನ್ನು ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಸರಿದೂಗಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಸೆಪ್ಟೆಂಬರ್ ಆರಂಭದಿಂದ ಪ್ರಾಥಮಿಕ ಶಾಲೆ, ಹೈಸ್ಕೂಲ್‌ಗಳಿಗೆ ಶನಿವಾರವೂ ಕ್ಲಾಸ್ ಇದ್ದರೆ ಪಿಯುಗಳಿಗೆ ಭಾನುವಾರವೂ ತರಗತಿ ಮಾಡಿ ಸೂಚನೆ ನೀಡಲಾಗಿದೆ.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಆರು ರಜೆಗಳನ್ನು ನೀಡಿದ್ದರೆ, ಇನ್ನು ಕೆಲವೆಡೆ 7 ದಿನಗಳ ಕಾಲ ಜಿಲ್ಲಾಡಳಿತ ವತಿಯಿಂದ ಶಾಲೆ ಮಕ್ಕಳಿಗೆ ರಜೆ ನೀಡಲಾಗಿತ್ತು. ಮಧ್ಯ ವಾರ್ಷಿಕ ಪರೀಕ್ಷೆಗಳು ಮುಗಿಯುವ ಮೊದಲು ಮಳೆಗಾಲದಲ್ಲಿ ನೀಡಿದ ಏಳು ರಜೆಗಳಿಂದಾಗಿ ಬಾಕಿ ಉಳಿದಿರುವ ಪಠ್ಯಗಳನ್ನು ಮುಗಿಸಿಬಿಡುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದಿದ್ದು, ಸೆಪ್ಟೆಂಬರ್‌ನಿಂದ ಪ್ರತಿ ಶನಿವಾರ ಪೂರ್ಣಾವಧಿಯ ತರಗತಿಗಳು ನಡೆಯಲಿವೆ.
ಆದರೆ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆಗಸ್ಟ್ ತಿಂಗಳಲ್ಲಿ ಬರುವ ಹಬ್ಬಹರಿದಿನಗಳ ರಜೆ, ಶನಿವಾರ, ಭಾನುವಾರ ಯಾವುದು ಕಾಲೇಜುಗಳಿಗೆ ಸುಲಭವಾಗುತ್ತದೆಯೇ ಅದರ ಪ್ರಕಾರ ತರಗತಿಗಳನ್ನು ನಡೆಸಿಕೊಂಡು ಮಧ್ಯವಾರ್ಷಿಕ ಪರೀಕ್ಷೆಯ ಮೊದಲು ಸಂಬಂಧಪಟ್ಟ ಸಿಲೆಬಸ್ ಪೂರ್ಣ ಮಾಡುವಂತೆ ಸೂಚನೆ ನೀಡಿದೆ.

ಜಿಲ್ಲಾ ಮಟ್ಟದಲ್ಲಿಯೇ ನಿರ್ಧಾರ:
ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿ ಸುಳ್ಯ ತಾಲೂಕಿನ ಬಿಇಒ ಅವರು ಆ.5ರಿಂದ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದ್ದರು. ಆದರೆ ಬಳಿಕ ಈ ಸುತ್ತೋಲೆ ತಡೆ ಹಿಡಿದು ಇಂತಹ ವಿಚಾರಗಳು ಜಿಲ್ಲಾಮಟ್ಟದಲ್ಲಿಯೇ ನಿರ್ಧಾರವಾಗಬೇಕು ಎನ್ನುವ ಕಾರಣಕ್ಕೆ ಡಿಡಿಪಿಐ ಮೂಲಕವೇ ಹೊಸ ಆದೇಶ ಹೊರಡಿಸಲು ಸಿದ್ಧತೆ ನಡೆಯುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಇಂತಹ ತರಗತಿಗಳನ್ನು ಮಾಡಲು ನಿರ್ಧಾರ ತಾಳಲಾಗಿದೆ.
ಮಳೆಗಾಲ ಇನ್ನೂ ಮುಗಿಯದ ಕಾರಣ ಸುಳ್ಯ ಬಿಇಒ ಈ ಹಿಂದೆ ನೀಡಿದ ಆದೇಶ ಹಿಂಪಡೆಯಲಾಗಿದೆ. ಆಗಸ್ಟ್‌ನಲ್ಲಿ ಮಳೆ ಸಾಧ್ಯತೆಗಳು ಇರುವ ಜತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಬಹುದು. ಈ ಕಾರಣದಿಂದ ಶನಿವಾರ ತರಗತಿಗಳನ್ನು ನಡೆಸಲು ಹಾಗೂ ನವೆಂಬರ್ ಹೊತ್ತಿಗೆ ಕೊನೆಗೊಳಿಸಲು ತೀರ್ಮಾನ ಮಾಡಿದ್ದೇವೆ. ಮಳೆಗಾಲದ ರಜೆಯನ್ನು ಸರಿದೂಗಿಸಲು ಏಕರೂಪ ಕ್ಯಾಲೆಂಡರ್‌ವನ್ನು ತರುವುದು ಎಲ್ಲಗೊಂದಲಗಳನ್ನು ನಿವಾರಿಸುತ್ತದೆ. ಮುಂಬರುವ ತಿಂಗಳುಗಳಲ್ಲಿಶಾಲೆಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರ್‌ನ್ನು ಉತ್ತಮವಾಗಿ ಯೋಜಿಸಲು ಇದು ಸಹಾಯಕವಾಗಿದೆ ಎಂದು ದಕ್ಷಿಣ ಕನ್ನಡ ಡಿಡಿಪಿಐ ಡಿ.ಆರ್ ನಾಯ್ಕ್ ಮಾಹಿತಿ ನೀಡಿದ್ದಾರೆ.

ದಸರಾ ರಜೆಗೆ ಹೊಡೆತ?:
14 ಶನಿವಾರಗಳಂದು (ಕೆಲವೆಡೆ 12) ಪೂರ್ಣ ತರಗತಿಗಳನ್ನು ನಡೆಸಬೇಕಿರುತ್ತದೆ. ಸೆಪ್ಟೆಂಬರ್‌ನಿಂದ ಸರಕಾರಿ ನಿಯಮಗಳ ಪ್ರಕಾರ, ಶಾಲೆಗಳು ಶೈಕ್ಷಣಿಕ ವರ್ಷದಲ್ಲಿ 224 ದಿನಗಳವರೆಗೆ ತರಗತಿಗಳನ್ನು ನಡೆಸಬೇಕಾಗಿರುತ್ತದೆ. ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ರಜೆಗಳನ್ನು ಘೋಷಿಸಿದರೆ ಅದು ದಸರಾ ರಜೆಯನ್ನು ಮೊಟಕುಗೊಳಿಸುವ ಸಾಧ್ಯತೆಯೂ ಇದ್ದು, ದಸರಾ ರಜೆಯನ್ನು ಮೊಟಕುಗೊಳಿಸುವ ವಿಚಾರ ಸರಕಾರ ಮಟ್ಟದಲ್ಲಿಯೇ ನಿರ್ಧಾರವಾಗಬೇಕಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!